ವಿಶೇಷ ವರದಿ: ರಹೀಂ ಉಜಿರೆ
ಉಡುಪಿ: ಸರ್ವಋತು ಬಂದರು ಖ್ಯಾತಿಯ ಮಲ್ಪೆ ಬಂದರು ಇದೀಗ ಅಪಾಯ ಆಹ್ವಾನಿಸುತ್ತಿದೆ. ಸಾವಿರಾರು ಮೀನುಗಾರರು ಇಲ್ಲಿ ಜೀವ ಕೈಯಲ್ಲಿ ಹಿಡಿದೇ ದುಡಿಯಬೇಕಾಗಿದೆ.
ಸರ್ಕಾರದ ನಿರ್ಲಕ್ಷ್ಯ ಧೋರಣೆ ದೊಡ್ಡ ದುರಂತವನ್ನೇ ಎದುರು ನೋಡುತ್ತಿದೆ ಎನ್ನುತ್ತಾರೆ ಮೀನುಗಾರರು!
ಆಕಸ್ಮಾತ್ ಆಯ ತಪ್ಪಿ ನೀರಿಗೆ ಬಿದ್ದರೆ ಜೀವಂತವಾಗಿ ಮೇಲೆ ಬರುವುದೇ ಡೌಟು. ಕಾರಣ ಬಂದರಲ್ಲಿ ಹೂಳು ತುಂಬಿಕೊಂಡಿದೆ. ಕಳೆದ ಐದು ವರ್ಷಗಳಿಂದ ಇಲ್ಲಿ ಹೂಳೆತ್ತಿಲ್ಲ.
ಮೀನುಗಾರಿಕೆ ನಡೆಸುವುದು ಸಮದ್ರದಲ್ಲೇ ಆದರೂ, ಮತ್ಸ್ಯ ಬೇಟೆ ಮುಗಿಸಿ ಬರುವ ಮೀನುಗಾರಿಕೆ ದೋಣಿ, ಬೋಟ್ ಗಳು ಲಂಗರು ಹಾಕುವುದು ಬಂದರಿನಲ್ಲಿ.
ಮೀನನ್ನು ಅನ್ ಲೋಡ್ ಮಾಡುವುದೂ ಇಲ್ಲೇ. ವ್ಯಾಪಾರ ವಹಿವಾಟು ಕೂಡ ಬಂದರಿನಲ್ಲೇ. ಕೆಲವು ವರ್ಷಗಳಿಂದ ಬಂದರಿನಲ್ಲಿ ಹೂಳು ತುಂಬಿಕೊಂಡಿರುವ ಕಾರಣ ಬೋಟ್ ಗಳ ಸಂಚಾರಕ್ಕೆ ಸಮಸ್ಯೆ ಆಗ್ತಾ ಇದೆ. ಇಳಿತದ ಸಂದರ್ಭ ತಳಭಾಗ ಕಾಣುತ್ತಿದೆ. ಕೆಲ ವರ್ಷಗಳ ಹಿಂದೆ ಡ್ರಜ್ಜಿಂಗ್ ನಡೆಸುವುದಕ್ಕೆ ಮುಂಬೈ ಕಂಪನಿಗೆ ಟೆಂಡರ್ ನೀಡಲಾಗಿತ್ತು. ಆದರೆ, ತಾಂತ್ರಿಕ ಕಾರಣದಿಂದ ಅದು ಪೂರ್ತಿ ಆಗದೇ ಅರ್ಧಕ್ಕೇ ನಿಂತಿತು.
ಮಲ್ಪೆ ಬಂದರಿನಲ್ಲಿ 2 ಸಾವಿರದಷ್ಟು ಬೋಟ್‌ಗಳಿವೆ. ಬೆಳಗ್ಗೆ 4ರಿಂದ ರಾತ್ರಿ ತನಕ ಸಾವಿರಾರು ಮಂದಿ ಕೆಲಸದಲ್ಲಿ ತೊಡಗುತ್ತಾರೆ. ಅಪ್ಪಿ ತಪ್ಪಿ ನೀರಿಗೆ ಬಿದ್ದರೆ ಜೀವ ಉಳಿಯುವುದು ಹಾಗಿರಲಿ, ಹೆಣ ಸಿಗುವುದೇ ಗ್ಯಾರಂಟಿ ಇಲ್ಲ! ಹೀಗಾಗಿ ಡ್ರೆಜ್ಜಿಂಗ್ ನಡೆಸಿ ಎಂದು ಮೀನುಗಾರರು ಒತ್ತಾಯಿಸುತ್ತಿದ್ದಾರೆ.
ಮೀನುಗಾರರ ಸಮಸ್ಯೆ ಆಲಿಸಬೇಕಾದ ಸಚಿವ ಮಹಾಶಯರು ಇಲ್ಲಿಗೆ ಭೇಟಿ ಕೊಟ್ಟದ್ದೇ ಕಡಿಮೆ. ಹೀಗಾಗಿ ಮಲ್ಪೆ ಬಂದರಿನ ಸದ್ಯದ ಪರಿಸ್ಥಿತಿ ಗಂಭೀರವಾಗಿದೆ. ತಡ ಮಾಡದೆ ತುಂಬಿರುವ ಹೂಳು ತೆಗೆಯುವತ್ತ ಸಂಬಂಧಪಟ್ಟ ಇಲಾಖೆ ಗಮನ ಹರಿಸಬೇಕಾಗಿದೆ.
Kshetra Samachara
25/11/2021 05:49 pm