*ವರದಿ: ರಹೀಂ ಉಜಿರೆ, ಪಬ್ಲಿಕ್ ನೆಕ್ಟ್ಸ್, ಉಡುಪಿ*
ಮಲ್ಪೆ: ಇತ್ತೀಚೆಗೆ ಹಲವು ದುರಂತಗಳಿಗೆ ಸಾಕ್ಷಿಯಾಗಿದ್ದ ಕೃಷ್ಣ ನಗರಿಯ ಪ್ರಸಿದ್ಧ ಪ್ರವಾಸಿ ತಾಣ ಸೈಂಟ್ ಮೇರಿಸ್ ಗೆ ಕಾಯಕಲ್ಪ ಸಿಗಲಿದೆ. ದಿನಂಪ್ರತಿ ಸಾವಿರಾರು ಪ್ರವಾಸಿಗರು ಬರುವ ದ್ವೀಪದಲ್ಲಿ ಸುರಕ್ಷತೆಗೆ ಗಮನ ಕೊಡಲು ಜಿಲ್ಲಾಡಳಿತ ಮುಂದಾಗಿದೆ. ಒಂದೇ ತಿಂಗಳ ಅಂತರದಲ್ಲಿ ಆರು ಜನ ಕಾಲೇಜು ವಿದ್ಯಾರ್ಥಿಗಳು ಈ ದ್ವೀಪದಲ್ಲಿ ಸೆಲ್ಫಿ ತೆಗೆಯಲು ಹೋಗಿ ನೀರಿನಲ್ಲಿ ಬಿದ್ದು ಸಾವನ್ನಪ್ಪಿದ್ರು. ಜಿಲ್ಲಾಡಳಿತ ಈ ದುರಂತವನ್ನು ಗಂಭೀರವಾಗಿ ಪರಿಗಣಿಸಿದೆ.
ಇತ್ತೀಚೆಗೆ ಮಲ್ಪೆ ಅಭಿವೃದ್ಧಿ ಸಮಿತಿ ಸಭೆ ಕರೆದಿದ್ದ ಜಿಲ್ಲಾಧಿಕಾರಿಗಳು ಅಗತ್ಯ ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ಇತ್ತೀಚೆಗೆ ಇಲ್ಲಿಗೆ ಬರುವ ಪ್ರವಾಸಿಗರು, ಅದರಲ್ಲೂ ವಿದ್ಯಾರ್ಥಿಗಳು ಸೆಲ್ಫಿ ಕ್ಲಿಕ್ಕಿಸಲು ಹೋಗಿ ದುರಂತ ಸಾವು ಕಾಣುವ ವಿದ್ಯಮಾನಗಳು ಹೆಚ್ಚಾಗಿ ನಡೆಯುತ್ತಿವೆ. ದ್ವೀಪದಲ್ಲಿ ಸೆಲ್ಫಿ ಕ್ಲಿಕ್ಕಿಸುವಾಗ ಸಾವನ್ನಪ್ಪುತ್ತಿರುವ ಘಟನೆಗಳು ನಡೆಯುತ್ತಿರುವುದರಿಂದ ಸೈಂಟ್ ಮೇರಿಸ್ ನಲ್ಲಿ ಜಿಲ್ಲಾಡಳಿತದ ವತಿಯಿಂದ ಸೆಲ್ಫಿ ಟವರ್ / ಸೆಲ್ಫೀ ಪಾಯಿಂಟ್ ನಿರ್ಮಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಜೊತೆಗೆ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ವಿಶೇಷ ಸುರಕ್ಷಾ ಕ್ರಮಗಳನ್ನು ಅನುಸರಿಸಲು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದ್ದಾರೆ.ಅಪರೂಪದ ದ್ವೀಪ ಸೈಂಟ್ ಮೇರಿಸ್ ಅನ್ನು ಕೇವಲ ಪ್ರವಾಸಿ ತಾಣವಾಗಿ ಮಾತ್ರವಲ್ಲದೆ ಅಧ್ಯಯನಕ್ಕೂ ಹೆಚ್ಚು ಒತ್ತು ನೀಡಲು ಜಿಲ್ಲಾಧಿಕಾರಿ ನೇತೃತ್ವದ ಸಭೆ ತೀರ್ಮಾನಿಸಿದೆ.
Kshetra Samachara
27/04/2022 05:28 pm