ಕುಂದಾಪುರ: ತಾಲೂಕಿನ ಪ್ರಸಿದ್ಧ ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನದ ಪುಷ್ಕರಣಿಯಲ್ಲಿ ಮೀನುಗಳು ಸಾಯುತ್ತಿವೆ.ಕೆಲವು ದಿನಗಳಿಂದ ಭಾರೀ ಸಂಖ್ಯೆಯ ಮೀನುಗಳು ಸಾಯುತ್ತಿದ್ದು ಪವಿತ್ರ ನೀರು ಕಲುಷಿತಗೊಳ್ಳುತ್ತಿದೆ ಎಂದು ಭಕ್ತರು ಮತ್ತು ಸ್ಥಳೀಯರು ಆತಂಕಗೊಂಡಿದ್ದಾರೆ.
ಪುಷ್ಕರಣಿಯ ಒಂದು ಪಾರ್ಶ್ವದಲ್ಲಿ ಕೊಳಚೆ ನೀರು ನುಗ್ಗಿ ಪವಿತ್ರ ನೀರು ಕಲುಷಿತಗೊಳ್ಳುತ್ತಿದ್ದು ಇದರಿಂದಾಗಿ ವಿಪರೀತ ದುರ್ವಾಸನೆ ಬರುತ್ತಿದೆ. ಸ್ಥಳೀಯ ಕೈಗಾರಿಕೆಯಿಂದ ಕಲುಷಿತ ನೀರನ್ನು ಹೊರ ಬಿಡುತ್ತಿರುವ ಪರಿಣಾಮ ದೇವಸ್ಥಾನದ ಕೆರೆ ತುಂಬಿ ಕಲುಷಿತ ನೀರಿನಿಂದಾಗಿ ಮೀನುಗಳು ಸಾಯುತ್ತಿವೆ ಎಂದು ಸ್ಥಳೀಯರು ಹೇಳಿದ್ದಾರೆ.
ದೇವಸ್ಥಾನ ಮಾತ್ರವಲ್ಲದೆ ಸ್ಥಳೀಯ ಪರಿಸರ, ಕೃಷಿಭೂಮಿಗೂ ಕಲುಷಿತ ನೀರು ನುಗ್ಗಿ ದುರ್ವಾಸನೆ ಬರುವುದರ ಜೊತೆಗೆ ನೀರು ಮತ್ತು ಪರಿಸರ ಹಾಳಾಗುತ್ತಿದೆ.ಜೊತೆಗೆ ಸ್ಥಳೀಯ ಮನೆಗಳ ಬಾವಿ ನೀರು ಕೂಡ ಹಾಳಾಗುತ್ತಿದೆ ಎಂದು ಸ್ಥಳೀಯರಿಂದ ಆರೋಪ ಕೇಳಿಬಂದಿದೆ.ಪುಷ್ಕರಣಿಯ ನೀರಿನಿಂದ ದೇವರಿಗೆ ಅಭಿಷೇಕ ಮಾಡಲಾಗುತ್ತದೆ. ಅಲ್ಲದೆ ಬರುವ ಭಕ್ತರು ಕೂಡ ಸ್ನಾನ ಹಾಗೂ ತೀರ್ಥ ಪ್ರೋಕ್ಷಣೆ ಮಾಡುವ ಸಂಪ್ರದಾಯ ಇದ್ದು ತಕ್ಷಣ ಸಂಬಂಧಪಟ್ಟವರು ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
Kshetra Samachara
07/10/2022 06:42 pm