ಮಂಗಳೂರು: ರಸ್ತೆ ದುರಸ್ತಿಗೊಳಿಸಿ ಎಂದು ಎಲ್ಲರೂ, ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ದುಂಬಾಲು ಬೀಳುವುದು ಪ್ರತಿಭಟನೆ ನಡೆಸುವುದನ್ನು ನೋಡುತ್ತಿರುತ್ತೇವೆ. ಆದರೆ ಮಂಗಳೂರಿನಲ್ಲೊಬ್ಬ ಮಹಿಳೆ ರಸ್ತೆ ಕಾಮಗಾರಿ ನಡೆಸದಿರಿ ಎಂದು ರಸ್ತೆಯ ಮೇಲೆ ಮಲಗಿ ಹೈಡ್ರಾಮಾ ಮಾಡಿದ್ದಾರೆ.
ನಗರದ ಮಣ್ಣಗುಡ್ಡೆ ಪ್ರದೇಶದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿತ್ತು. ಅಲ್ಲಿಗೆ ಬಂದ ಈ ಮಹಿಳೆ ಕಾಂಕ್ರೀಟಿಕರಣ ಆಗುತ್ತಿರುವ ಜಾಗ ತಮ್ಮದೆಂದು ತಗಾದೆ ತೆಗೆದಿದ್ದಾರೆ. ತಮ್ಮ ಜಾಗದಲ್ಲಿ ರಸ್ತೆ ಕಾಮಗಾರಿ ನಡೆಸಬಾರದೆಂದು ಕಾಮಗಾರಿ ನಡೆಸುತ್ತಿರುವ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ್ದಾರೆ. ಅಲ್ಲದೆ ರಸ್ತೆ ಕಾಂಕ್ರೀಟ್ ನಡೆಯದಂತೆ ತಡೆಯೊಡ್ಡಿದ ಮಹಿಳೆ ರಸ್ತೆಯಲ್ಲಿಯೇ ಮಲಗಿದ್ದಾರೆ.
ಈ ವೇಳೆ ಬರ್ಕೆ ಠಾಣೆಯ ಮಹಿಳಾ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮಹಿಳೆಯ ಮನವೊಲಿಸಿದ್ದಾರೆ. ಆದರೆ ಮಹಿಳೆ ಜಪ್ಪಯ್ಯ ಅಂದರೂ ಮೇಲೇಳಲಿಲ್ಲ. ಆ ಬಳಿಕ ಮಹಿಳಾ ಪೊಲೀಸ್ ಸಿಬ್ಬಂದಿ ಹರಸಾಹಸಪಟ್ಟು ಮಹಿಳೆಯನ್ನು ಅಲ್ಲಿಂದ ಎಬ್ಬಿಸಿ ಆಂಬ್ಯುಲೆನ್ಸ್ ನಲ್ಲಿ ಕರೆದೊಯ್ದಿದ್ದಾರೆ.
ಈ ಪ್ರದೇಶದಲ್ಲಿ ಎಲ್ಲಿಯೂ ರಸ್ತೆ ಕಾಮಗಾರಿ ನಡೆಸಿದರೂ ಮಹಿಳೆ ಅದನ್ನು ವಿರೋಧಿಸಿಸುವ ಯತ್ನ ನಿರಂತರವಾಗಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಒಟ್ಟಿನಲ್ಲಿ ಮಹಿಳೆಯ ಹೈಡ್ರಾಮಾಕ್ಕೆ ಮಹಿಳಾ ಪೊಲೀಸ್ ಸಿಬ್ಬಂದಿ ಹೈರಾಣದಾದ್ದಂತೂ ಸತ್ಯ.
PublicNext
24/05/2022 04:44 pm