ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: "ರಕ್ತ ಚಂದನ ಮೂಲಕ ಹೆಣ್ಣು ಮಕ್ಕಳಿಗೆ ಸುಭದ್ರ ಭವಿಷ್ಯ ಯೋಜ‌ನೆ"

ಬ್ರಹ್ಮಾವರ: ಹಿಂದೆಲ್ಲ ರಕ್ತ ಚಂದನ ಅಂದರೆ ಕೆಲವೇ ಕೆಲವು ಜನರಿಗೆ ಮಾತ್ರ ಗೊತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ರಕ್ತ ಚಂದನದ ಬೆಲೆ ಮತ್ತದರ ಔಷಧೀಯ ಗುಣಗಳ ಬಗ್ಗೆ ಎಲ್ಲರಿಗೂ ಗೊತ್ತಾಗಿದೆ.

ರಕ್ತ ಚಂದನದ ಕುರಿತು ಆಸಕ್ತಿ ಇರಿಸಿಕೊಂಡ ಬ್ರಹ್ಮಾವರದ ವ್ಯಕ್ತಿಯೊಬ್ಬರು ಇದರ ದೊಡ್ಡ ತೋಟ ಮಾಡಿರುವುದಲ್ಲದೆ ಇತರರಿಗೂ ರಕ್ತಚಂದನ ಬೆಳೆಯ ಮಹತ್ವ ಸಾರುತ್ತಿದ್ದಾರೆ.

ಬ್ರಹ್ಮಾವರ ತಾಲೂಕು ಎಳ್ಳಂಪಳ್ಳಿ ಗ್ರಾಮದ ಸತೀಶ್ ಬಿ. ಶೆಟ್ಟಿ ರಕ್ತ ಚಂದನ ಕುರಿತು ಆಸಕ್ತಿ ಇರಿಸಿಕೊಂಡಿರುವ ರೈತ. ಕೇವಲ‌ ರಕ್ತ ಚಂದನ ಬೆಳೆಯದೆ, ರಕ್ತ ಚಂದನದ ಮೂಲಕ ಹೆಣ್ಣು ಮಕ್ಕಳ ಭವಿಷ್ಯ ಸುಭದ್ರಗೊಳಿಸುವ ಯೋಜನೆಯನ್ನು ಕೂಡ ಸತೀಶ್ ಬಿ. ಶೆಟ್ಟಿ ಪ್ರಾರಂಭಿಸಿದ್ದಾರೆ. ಇದಕ್ಕೆ ಸ್ಥಳೀಯ ಪೋಷಕರಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ತಮ್ಮದೇ ಎಸ್.ಡಿ.ಪಿ. ಡೆವಲಪ್‌ಮೆಂಟ್ ಸೊಸೈಟಿ ವತಿಯಿಂದ ಸತೀಶ್ ಬಿ.ಶೆಟ್ಟಿ ಈಗಾಗಲೇ ಉಡುಪಿ ಜಿಲ್ಲೆಯಾದ್ಯಂತ 300 ಎಕರೆಗೂ ಅಧಿಕ ಜಾಗದಲ್ಲಿ ಲಕ್ಷಕ್ಕೂ ಮಿಕ್ಕಿ ರಕ್ತಚಂದನ ಗಿಡಗಳನ್ನು ಬೆಳೆಸಿದ್ದಾರೆ. ಹಸಿರು ಬೆಳೆಸುವ ಮನೋಭಾವದಿಂದ, ಭವಿಷ್ಯದಲ್ಲಿ ಹೆಣ್ಣು ಮಕ್ಕಳು ಆರ್ಥಿಕವಾಗಿ ಸದೃಢರಾಗಬೇಕು ಎನ್ನುವ ಆಶಯದೊಂದಿಗೆ ಯೋಜನೆ ಪ್ರಾರಂಭಿಸಿರುವ ಇವರು, 5 ವರ್ಷದೊಳಗಿನ ಹೆಣ್ಣು ಮಕ್ಕಳ ಹೆಸರಿನಲ್ಲಿ ಪೋಷಕರಿಗೆ ಉಚಿತವಾಗಿ 15 ರಕ್ತಚಂದನ ಗಿಡಗಳನ್ನು ವಿತರಿಸುತ್ತಾ ಬಂದಿದ್ದಾರೆ.

ಪ್ರತಿ ಮಗುವಿಗೆ ನೀಡುವ ರಕ್ತಚಂದನ ಗಿಡ ಮುಂದಿನ 15 ವರ್ಷಗಳಲ್ಲಿ ಉತ್ತಮ ಬೆಲೆ ಬಾಳುವ ಮರಗಳಾಗುತ್ತವೆ. ಇದರಿಂದ ಬರುವ ಮೊತ್ತವು ವಿದ್ಯಾಭ್ಯಾಸ ಮತ್ತು ಭವಿಷ್ಯದ ಕೆಲಸ- ಕಾರ್ಯಗಳಿಗೆ ಸದುಪಯೋಗವಾಗುತ್ತದೆ. ಪೋಷಕರು ಇದರ ಪ್ರಯೋಜನ ಪಡೆದುಕೊಳ್ಳುವುದರಿಂದ ತಮ್ಮ ಮಗಳನ್ನು ಆರ್ಥಿಕವಾಗಿ ಬಲಿಷ್ಠಗೊಳಿಸುವುದರ ಜತೆಗೆ, ಹಸಿರು ಉಳಿಸುವ ಸಂಸ್ಥೆಯ ಯೋಜನೆಯಲ್ಲಿ ಪಾಲ್ಗೊಂಡಂತಾಗುತ್ತದೆ ಎನ್ನುತ್ತಾರೆ ಸತೀಶ್ ಬಿ. ಶೆಟ್ಟಿ.

ಒಟ್ಟಾರೆ ಸತೀಶ್ ಬಿ. ಶೆಟ್ಟಿ ಅವರ ಈ ಯೋಜನೆಗೆ ಭಾರಿ ಸ್ಪಂದನೆ ಸಿಕ್ಕಿದೆ. ಒಂದಿಷ್ಟು ಹೆಣ್ಣು ಮಕ್ಕಳಿಗೆ ಇದರಿಂದ ಪ್ರಯೋಜನವಾದರೆ, ಇವರ ಶ್ರಮವೂ ಸಾರ್ಥಕ. ಅಲ್ಲವೆ?

Edited By :
PublicNext

PublicNext

10/08/2022 09:14 pm

Cinque Terre

41.12 K

Cinque Terre

2

ಸಂಬಂಧಿತ ಸುದ್ದಿ