ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಅರೆಕೆರೆಬೈಲು ಜನರನ್ನು ಸೊಳ್ಳೆಯಿಂದ ಮುಕ್ತಿಗೊಳಿಸಿ; ಕಡಲ ಒಡಲು ಸೇರುತ್ತಿರುವ ಕೊಳಚೆ ನೀರು !

ಮಂಗಳೂರು: ನಗರದ ಮಂಗಳಾದೇವಿ ಸಮೀಪದ ಮುಳಿಹಿತ್ಲುವಿನ ಅರೆಕೆರೆಬೈಲು ಪರಿಸರದಲ್ಲಿ ಒಳಚರಂಡಿ ನೀರು ಸರಾಗವಾಗಿ ರಾಜ ಕಾಲುವೆಯನ್ನು ಸೇರುತ್ತಿರುವ ಪರಿಣಾಮ ಈ ಪ್ರದೇಶದಲ್ಲಿ ಸೊಳ್ಳೆಗಳ ಕಾಟ ಉಲ್ಬಣಗೊಂಡಿದೆ. ಸಂಜೆಯಾದರೆ ಸಾಕು ಈ ಪ್ರದೇಶದ ಜನರು ಸೊಳ್ಳೆಗೆ ಹೆದರಿ ಬದುಕುವಂತಹ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಈ ಪ್ರದೇಶದ ಜನತೆಗೆ ಸಾಂಕ್ರಾಮಿಕ ಕಾಯಿಲೆಯ ಭೀತಿ ಎದುರಾಗಿದೆ‌.

2018-19ರಲ್ಲಿ ಮಂಗಳಾದೇವಿಯ ಗುಜ್ಜರಕೆರೆ, ಗೋರಕ್ಷದಂಡು ಸೇರಿದಂತೆ ಅರೆಕೆರೆಬೈಲು ಪ್ರದೇಶವು ಡೆಂಗ್ಯು, ಮಲೇರಿಯಾದ ಉಗಮ ತಾಣವಾಗಿ ಜನರು ತತ್ತರಿಸಿದ್ದರು‌. ಅಂದು ಈ ಪ್ರದೇಶದ ಐವರು ಡೆಂಗ್ಯುವಿಗೆ ಬಲಿಯಾಗಿದ್ದರು. ಈ ಬಗ್ಗೆ ಸಾಕಷ್ಟು ಸಲ ಜನಪ್ರತಿನಿಧಿಗಳಿಗೆ, ಮನಪಾ ಅಧಿಕಾರಿಗಳಿಗೆ ತಿಳಿಸಲಾಗಿತ್ತು. ಜನಪ್ರತಿನಿಧಿಗಳು ಸೇರಿದಂತೆ ಅಧಿಕಾರಿಗಳು ಆ ಪ್ರದೇಶಕ್ಕೆ ಬಂದು ಪರಿಸ್ಥಿತಿಯ ಅವಲೋಕನ ಮಾಡಿದ್ದರು‌. ಅಲ್ಲದೆ ಈ ತೊಂದರೆಗಳನ್ನು ಸರಿಪಡಿಸುವ ಆಶ್ವಾಸನೆಯನ್ನು ನೀಡಿದ್ದರು. ಆದರೆ ಪ್ರಗತಿ ಮಾತ್ರ ಶೂನ್ಯವಾಗಿದೆ.

ಅರೆಕೆರೆಬೈಲುವಿನಲ್ಲಿರುವ ರಾಜಕಾಲುವೆಗೆ ಒಳಚರಂಡಿ ನೀರು ಹರಿಯುವುದೇ ಈ ಪರಿಸ್ಥಿತಿಗೆ ಮೂಲ ಕಾರಣ. ಈ ಕೊಳಚೆ ನೀರಿನ ಹರಿಯುವಿಕೆಯನ್ನು ಸ್ಥಗಿತಗೊಳಿಸುವಂತೆ ಇಲ್ಲಿನ ಜನತೆ ಸಾಕಷ್ಟು ಮನವಿ, ಒತ್ತಾಯ ಮಾಡುತ್ತಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಅಲ್ಲದೆ ಈ ಒಳಚರಂಡಿ ನೀರು ರಾಜಕಾಲುವೆಯ ಮೂಲಕ ನೇರವಾಗಿ ದ.ಕ.ಜಿಲ್ಲೆಯ ಜೀವನದಿ ನೇತ್ರಾವತಿಯನ್ನು ಸೇರುತ್ತಿದೆ.

ನೇತ್ರಾವತಿ ನದಿಯು ಕಡಲನ್ನು ಸೇರುವ ಪ್ರದೇಶದಲ್ಲಿ ಈ ರಾಜಕಾಲುವೆಯ ಕೊಳಚೆ ನೀರು ಸೇರುತ್ತಿರುವ ಪರಿಣಾಮ ನೇತ್ರಾವತಿ ನದಿಯೊಂದಿಗೆ ಸಮುದ್ರವೂ ಕಲುಷಿತಗೊಳ್ಳುತ್ತಿದೆ. ಇದು ಜಲಚರಗಳಿಗೂ ಕಂಟಕವಾಗುವುದಲ್ಲದೆ, ಕಡಲ ಉತ್ಪತ್ತಿಯನ್ನು ತಿನ್ನುವ ಜನತೆಗೂ ತೊಂದರೆ ಕಟ್ಟಿಟ್ಟ ಬುತ್ತಿಯಂತಾಗಿದೆ. ಆದ್ದರಿಂದ ತಕ್ಷಣ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಬಗ್ಗೆ ತಕ್ಷಣ ಗಮನಹರಿಸಿ ಸರಿಯಾದ ಕ್ರಮ ಕೈಗೊಳ್ಳುವಂತೆ ಇಲ್ಲಿನ‌‌ ಸ್ಥಳೀಯ ನಿವಾಸಿ ನೇಮು ಕೊಟ್ಟಾರಿಯವರು ಒತ್ತಾಯಿಸಿದ್ದಾರೆ.

Edited By :
Kshetra Samachara

Kshetra Samachara

04/05/2022 04:18 pm

Cinque Terre

5.88 K

Cinque Terre

0

ಸಂಬಂಧಿತ ಸುದ್ದಿ