ಕುಂದಾಪುರ: ರಾಷ್ಟ್ರ ಪ್ರೇಮ, ರಾಷ್ಟ್ರ ಭಕ್ತಿ, ರಾಷ್ಟ್ರ ಗೌರವ ಎಲ್ಲವೂ ಪ್ರತಿಯೊಬ್ಬ ಭಾರತೀಯ ಪ್ರಜೆಯ ಹೃದಯದಲ್ಲಿರಬೇಕು. ಆಡಳಿತ ಯಂತ್ರವೂ ಇದನ್ನು ಅಲ್ಲಗಳೆಯುವಂತಿಲ್ಲ. ಆದರೆ ಕುಂದಾಪುರದ ಮಟ್ಟಿಗೆ ಅದೇಕೋ ಇಲಾಖೆಗಳು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ರಾಷ್ಟ್ರ ಭಕ್ತಿಯ ಪ್ರತೀಕವಾಗಿರುವ ಸ್ವಾತಂತ್ರ್ಯ ದಿನಾಚರಣೆಯನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸಿದಂತಿಲ್ಲ. ಯಾಕೆಂದರೆ ಸ್ವಾಂತ್ರ್ಯ ದಿನಾಚರಣೆಗೆ ಇನ್ನುಳಿದಿರುವುದು ಏಳೇ ದಿನ. ಆದರೂ ತಾಲೂಕು ಆಡಳಿತ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿಕೊಳ್ಳಬೇಕಾದ ಕುಂದಾಪುರದ ಗಾಂಧೀ ಮೈದಾನಕ್ಕಿನ್ನೂ ಸ್ವಚ್ಛತೆಯ ಭಾಗ್ಯ ಬಂದಿಲ್ಲ.
ಹೌದು. ಕರಾವಳಿಯ ಅತ್ಯಂತ ವಿಶಾಲವಾದ ಮೈದಾನಗಳಲ್ಲಿ ಕುಂದಾಪುರದ ಗಾಂಧೀ ಮೈದಾನವೂ ಒಂದು. ಇಲ್ಲಿ ಪ್ರತಿನಿತ್ಯ ವಾಕಿಂಗ್ ಮಾಡಲು, ರನ್ನಿಂಗ್ ರೇಸ್ ಮಾಡಲು ಬೇಕಾದ ದೊಡ್ಡದಾದ ಟ್ರ್ಯಾಕ್‌ಗಳಿವೆ. ಪ್ರತೀ ವರ್ಷ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಗಳನ್ನು ತಾಲೂಕು ಆಡಳಿತ ಇಲ್ಲಿಯೇ ನಡೆಸುತ್ತದೆ. ಕುಂದಾಪುರದ ಹಲವು ಶಾಲೆಗಳ ವಿದ್ಯಾರ್ಥಿಗಳು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭ ಪಥಸಂಚಲನ ನಡೆಸುತ್ತವೆ. ಪೊಲೀಸರೂ ಪಥ ಸಂಚಲನ ಮಾಡುತ್ತಾರೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೂ ಇದೇ ಮೈದಾನದಲ್ಲಿ ನಡೆಯುತ್ತವೆ.
ಕಳೆದ ವರ್ಷವಷ್ಟೇ ಇಲ್ಲಿನ ಸ್ಟೇಡಿಯಂ ಅನ್ನು ಬದಲಾಯಿಸಲಾಗಿತ್ತು. ಈ ವೇಳೆ ರಾಷ್ಟ್ರ ಲಾಂಛನದ ಕೆಳಗಿರಬೇಕಾದ ಅಶೋಕ ಚಕ್ರ, ಕುದುರೆ ಆನೆಗಳ ಸಂಕೇತವನ್ನೇ ಕಡೆಗಣಿಸಲಾಗಿತ್ತು. ಮಾಧ್ಯಮಗಳ ವರದಿಯ ಬಳಿಕ ಎಚ್ಚೆತ್ತುಕೊಂಡ ಇಲಾಖೆ ಹಾಗೂ ತಾಲೂಕು ಆಡಳಿತ ತರಾತುರಿಯಲ್ಲಿ ತಗಡಿನಲ್ಲಿ ಅಶೋಕ ಚಕ್ರ ಮುದ್ರಿಸಿ ಲಾಂಛನದ ಕೆಳಭಾಗಕ್ಕೆ ಅಂಟಿಸಿದ್ದರು!. ಆದರೆ ಅದಕ್ಕಿನ್ನೂ ಬದಲಾವಣೆಯ ಯೋಗ ಬರದೇ ಇರುವುದು ಒಂದು ಕಡೆಯಾದರೆ, ಇಡೀ ಗಾಂಧೀ ಮೈದಾನ ಹುಲ್ಲು, ಕಸದ ರಾಶಿಯಿಂದ ತುಂಬಿದೆ. ಅಲ್ಲಲ್ಲಿ ಬೆಳಿದಿರುವ ಗಿಡಗಳು, ಎಲ್ಲೆಂದರಲ್ಲಿ ಎಸೆಯಲ್ಪಟ್ಟ ತ್ಯಾಜ್ಯ, ಹರಿದ ಶೂಗಳು, ಪ್ಲಾಸ್ಟಿಕ್ ತ್ಯಾಜ್ಯಗಳು, ಕುಡಿದೆಸೆದ ಮದ್ಯದ ಬಾಟಲಿಗಳು ರಾಶಿ ಬಿದ್ದಿವೆ. ಆದರೆ ಕ್ರೀಡಾ ಇಲಾಖೆ, ಪುರಸಭೆ, ಮತ್ತು ತಾಲೂಕು ಆಡಳಿತ ಮಾತ್ರ ಕಣ್ಮುಚ್ಚಿ ಕುಳಿತಿವೆ. ಸ್ವಾತಂತ್ರ್ಯ ದಿನಾಚರಣೆಗೆ ಇನ್ನುಳಿದಿರುವುದು ಏಳೇ ದಿನ. ಇನ್ನಾದರೂ ಸಂಬಂಧಪಟ್ಟವರು ಗಾಂಧಿ ಮೈದಾನವನ್ನು ಶುಚಿಗೊಳಿಸಿ ರಾಷ್ಟ್ರ ಭಕ್ತಿಯನ್ನು ಪ್ರದರ್ಶಿಸುತ್ತಾರೋ ಕಾದು ನೋಡಬೇಕಾಗಿದೆ.
ಜಯಶೇಖರ್ ಮಡಪ್ಪಾಡಿ, ಪಬ್ಲಿಕ್ ನೆಕ್ಸ್ಟ್ ಕುಂದಾಪುರ
Kshetra Samachara
08/08/2022 06:31 pm