ಉಡುಪಿ: ರಾಷ್ಟ್ರೀಯ ಹೆದ್ದಾರಿ 169 ಎ ಅವ್ಯವಸ್ಥೆ ಮತ್ತು ಹೊಂಡಗಳು ತುಂಬಿರುವ ಬಗ್ಗೆ ನಿನ್ನೆಯಷ್ಟೆ ಪಬ್ಲಿಕ್ ನೆಕ್ಸ್ಟ್ ವರದಿ ಪ್ರಕಟಿಸಿತ್ತು. ಇದೇ ವೇಳೆ ನಗರಸಭೆ ಸಾಮಾನ್ಯ ಸಭೆಯಲ್ಲೂ ರಸ್ತೆ ಅವ್ಯವಸ್ಥೆ ಕುರಿತು ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.
ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯ ಉದ್ದಕ್ಕೂ ರಸ್ತೆ ಮತ್ತು ಒಳಚರಂಡಿ ಕುರಿತು ಚರ್ಚೆ ನಡೆಯಿತು. ಕೆಳಪರ್ಕಳದಲ್ಲಿ ಕುಸಿದಿರುವ ರಸ್ತೆಯನ್ನು ವಾರಾಹಿ ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಇಂಜಿನಿಯರ್‌ಗಳು ಸ್ಥಳ ಪರಿಶೀಲನೆ ನಡೆಸಿ ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಹೆಬ್ರಿ ಮಣಿಪಾಲ ರಸ್ತೆ ಸಂಪರ್ಕವೇ ಕಡಿತ ಆಗುವ ಸಾಧ್ಯತೆ ಇದೆ ಎಂದು ನಗರಸಭೆ ಅಧ್ಯಕ್ಷೆ ಎಚ್ಚರಿಕೆ ನೀಡಿದರು. ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಇಂಜಿನಿ ಯರ್‌ಗಳು ಹಾಜರಿದ್ದ ಈ ಸಭೆಯಲ್ಲಿ ಸದಸ್ಯರುಗಳಿಂದ ನಗರಸಭಾ ವ್ಯಾಪ್ತಿಯ ಸಮಸ್ಯೆಗಳ ಮಹಾಪೂರವೇ ಕೇಳಿಬಂತು. ಕೆಳಪರ್ಕಳದಲ್ಲಿ ರಾಷ್ಟ್ರೀಯ ಹೆದ್ದಾರಿ ಕುಸಿದಿರುವ ಬಗ್ಗೆ ಅಧ್ಯಕ್ಷರು ಇಂಜಿನಿಯರ್ ಮಂಜುನಾಥ್ ಅವರನ್ನು ಪ್ರಶ್ನಿಸಿದರು. ಅದಕ್ಕೆ ಅವರು, ವಾರಾಹಿ ಕುಡಿಯುವ ನೀರಿನ ಪೈಪ್ ಲೈನ್‌ನಿಂದಾಗಿ ರಸ್ತೆ ಕುಸಿದಿರುವುದಾಗಿ ಹೇಳಿದರು.
ಇದಕ್ಕೆ ವಾರಾಹಿ ಯೋಜನೆಯ ಇಂಜಿನಿಯರ್ ಪ್ರತಿಕ್ರಿಯಿಸಿ, ನಮ್ಮ ಪೈಪ್ ಲೈನ್ ಮಾಡಿರುವ ಭಾಗದಲ್ಲಿ ರಸ್ತೆ ಕುಸಿದಿಲ್ಲ ಎಂದು ಸಮಜಾಯಿಷಿ ನೀಡಿದರು. ವಿಪಕ್ಷ ನಾಯಕ ರಮೇಶ್ ಕಾಂಚನ್ ಒತ್ತಾಯದಂತೆ ಎರಡು ಇಲಾಖೆಯ ಇಂಜಿನಿಯರ್‌ಗಳು ಸ್ಥಳ ಪರಿಶೀಲಿಸಿ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಅಧ್ಯಕ್ಷರು ಸೂಚಿಸಿದರು. ಇನ್ನು ರಾಷ್ಟ್ರೀಯ ಹೆದ್ದಾರಿ 169 ಎ ಇದರ ಇಂದ್ರಾಳಿ ರೈಲ್ವೆ ಸೇತುವೆ ಕಾಮಗಾರಿ ವಿಳಂಬದ ಕುರಿತೂ ಆಕ್ಷೇಪ ವ್ಯಕ್ತವಾಯಿತು.
Kshetra Samachara
28/06/2022 03:57 pm