ಮೂಡುಬಿದಿರೆ: ಕಂದಾಯ ಇಲಾಖೆಯ ನಿವೃತ್ತ ಉದ್ಯೋಗಿಯೋರ್ವರು ಉಪಧನ ಪಡೆಯಲು ಹರಸಾಹಸ ಪಡುತ್ತಿದ್ದು, ಕಾರ್ಮಿಕ ನ್ಯಾಯಾಲಯದಲ್ಲಿ ಅವರ ಪರ ತೀರ್ಪು ಬಂದರೂ ಸರ್ಕಾರ ಮತ್ತು ಅಧಿಕಾರಿಗಳು ಸತಾಯಿಸುತ್ತಿರುವುದಾಗಿ ಸುದ್ದಿಗೋಷ್ಟಿಯಲ್ಲಿ ಆರೋಪಿಸಿದ್ದಾರೆ.
ಸುಮತಿ ಬಾಯಿ ಸಂತ್ರಸ್ಥ ನಿವೃತ್ತ ಉದ್ಯೋಗಿ. ಇವರು ಪ್ರಾರಂಭದಲ್ಲಿ ಕೊಕ್ಕಡದಲ್ಲಿ ವೃತ್ತಿ ಆರಂಭಿಸಿ ಎರಡು ವರ್ಷಗಳ ಬಳಿಕ ಮೂಡುಬಿದಿರೆ ವರ್ಗಾವಣೆಗೊಂಡು ಒಟ್ಟು ಮೂವತ್ತೆರಡೂವರೆ ವರ್ಷಗಳ ಕಾಲ ನಾಡ ಕಚೇರಿಯಲ್ಲಿ ಬೆರಳಚ್ಚುಗಾರ್ತಿಯಾಗಿ ದಿನಗೂಲಿ ನೆಲೆಯಲ್ಲಿ ದುಡಿದಿದ್ದರು. ಮೂಡಬಿದಿರೆಯಲ್ಲಿ ಸದ್ಯ ಖಾಯಂ ವಾಸವಾಗಿರುವ ಸುಮತಿ ಬಾಯಿ ಜಿ. ಇವರಿಗೆ ಉಪಧನ ಸಿಗಬೇಕಿತ್ತು. ನಿವೃತ್ತಿ ಬಳಿಕವೂ ತಹಸೀಲ್ದಾರ್ ಮತ್ತು ಜಿಲ್ಲಾಧಿಕಾರಿಯ ಮೂಲಕ ಪ್ರಯತ್ನ ಪಟ್ಟಿದ್ದರು.
ತೀವ್ರ ಹೋರಾಟದ ಬಳಿಕ ಇದೀಗ ಮಂಗಳೂರಿನ ಕಾರ್ಮಿಕ ನ್ಯಾಯಾಲಯದಲ್ಲಿ ತಹಸೀಲ್ದಾರರು ಮತ್ತು ಜಿಲ್ಲಾಧಿಕಾರಿಯವರನ್ನು ಪ್ರತಿವಾದಿಯನ್ನಾಗಿಸಿ ದಾವೆ ಹೂಡಿದ್ದು, ಉಪಧನ ರೂ. 4,27,280 ಮತ್ತು ಈ ಮೊತ್ತದ ಮೇಲೆ ಶೇ.10ರಂತೆ (2019ರ ಜು.1ರಿಂದ ಸಕ್ರಮ ಪ್ರಾಧಿಕಾರದಲ್ಲಿ ಠೇವಣಿ ಮಾಡುವವರೆಗೆ) ಬಡ್ಡಿ ಸೇರಿಸಿ ಸೆ.13ರೊಳಗೆ ಕೊಡಬೇಕು ಎಂದು ಕಳೆದ ಆ.13ರಂದು ಆದೇಶವಾಗಿದೆ. ಇನ್ನೂ ಫಲಾನುಭವಿಯ ಬ್ಯಾಂಕ್ ಖಾತೆಗೆ ಉಪಧನ ಸಂದಾಯವಾಗಿಲ್ಲ.
ನಾನು ನಿವೃತ್ತಿ ಹೊಂದಿದಾಗ ನನಗೆ ಖಾಯಂ ನೌಕರರಿಗೆ ಸಿಗುವ ಯಾವುದೇ ಸವಲತ್ತು ಸಿಗದೆ ಹಾಗೂ ಸರ್ಕಾರ ಆದೇಶವಿದ್ದರೂ ಉಪಧನ ನೀಡದೆ ನನ್ನನ್ನು ಆರ್ಥಿಕ ಸಂಕಷ್ಟದಲ್ಲಿರುವ ನನಗೆ ಆಗಿರುವ ತೊಂದರೆ ಇನ್ನು ಯಾರಿಗೂ ಆಗಬಾರದು. ಸರ್ವೋಚ್ಛ ನ್ಯಾಯಾಲಯದ ಆದೇಶವಿದ್ದರೂ ಫಲಾನುಭವಿಗಳು ತಮ್ಮ ಹಕ್ಕಿಗಾಗಿ ಹೋರಾಟ ಮಾಡುತ್ತ ಹೈರಾಣಾಗುವ ಪರಿಸ್ಥಿತಿ ಯಾರಿಗೂ ಬರಬಾರದು ಎಂದು ಸುಮತಿ ಬಾಯಿ ಅಳಲು ತೋಡಿಕೊಂಡಿದ್ದಾರೆ.
Kshetra Samachara
23/09/2021 04:25 pm