ಮುಲ್ಕಿ: ಅವಿಭಜಿತ ದ.ಕ. ಹಾಗೂ ಉಡುಪಿ ಜಿಲ್ಲೆಯ ಗಡಿಭಾಗದ ಪ್ರದೇಶ ಮುಲ್ಕಿ ಸಮೀಪದ ಬಳ್ಕುಂಜೆ ಗ್ರಾಪಂ ವ್ಯಾಪ್ತಿಯ ಕರ್ನಿರೆ ಶಾಂಭವಿ ನದಿಗೆ ಸುಮಾರು 9 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಅಣೆಕಟ್ಟು ಬಳಕುಂಜೆ ಗ್ರಾಮಸ್ಥರಿಗೆ ಊಟಕ್ಕಿಲ್ಲದ ಉಪ್ಪಿನಕಾಯಿಯಾಗಿದೆ ಎಂದು ಕೃಷಿಕ ಕರ್ನಿರೆ ವಿಶ್ವನಾಥ ಶೆಟ್ಟಿ ಆರೋಪಿಸಿದ್ದಾರೆ.
ಕರ್ನಿರೆ ಅಣೆಕಟ್ಟು ಬಳಿಯ ಬಳಕುಂಜೆ ಭಾಗದ ಸುಮಾರು ಸಾವಿರ ಎಕರೆ ಕೃಷಿ ಪ್ರದೇಶದ ಗ್ರಾಮಸ್ಥರಿಗೆ ಅನುಕೂಲವಾಗಲೆಂದು ನೀರು ಹರಿದು ಹೋಗಲು ಒಳಭಾಗದಲ್ಲಿ ತೋಡಿಗೆ ನಿರ್ಮಿಸಲಾದ ಕಾಂಕ್ರೀಟ್ ಸ್ಲ್ಯಾಬ್ ಕಳಪೆ ಕಾಮಗಾರಿಯಿಂದಾಗಿ ಕುಸಿದಿದೆ. ಅಣೆಕಟ್ಟಿನಲ್ಲಿ ಮರಮಟ್ಟು, ಹೂಳು ತುಂಬಿದ್ದು ಕೇಳುವವರಿಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಣೆಕಟ್ಟು ಪ್ರದೇಶದಲ್ಲಿ ಹೂಳು ತುಂಬಿದ ಕಾರಣ ಈಜಾಡಲು ಬಂದಿದ್ದ ಯುವಕ ಪ್ರಾಣ ಕಳೆದುಕೊಂಡ ಘಟನೆ ಇತ್ತೀಚೆಗೆ ನಡೆದಿದೆ ಎಂದರು.
ಸ್ಥಳೀಯ ಕೃಷಿಕ ರಮೇಶ್ ಸಫಲಿಗ ಮಾತನಾಡಿ, ಅಣೆಕಟ್ಟು ನಿರ್ಮಿಸಿ ಒಳಹರಿವಿನ ಮೂಲಕ ಎಕರೆಗಟ್ಟಲೆ ಕೃಷಿಗೆ ಸಂಪರ್ಕ ಕಲ್ಪಿಸುವ ಪೈಪ್ ಲೈನ್(ಸೈಫನ್) ನಲ್ಲಿ ಹೂಳು ತುಂಬಿದ್ದು, ಈ ಬಗ್ಗೆ ಅನೇಕ ಬಾರಿ ಬಳ್ಕುಂಜೆ ಗ್ರಾಪಂ ಹಾಗೂ ಸಂಬಂಧಿತ ಕೃಷಿ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ಗದ್ದೆ ಬದಿ ಅಳವಡಿಸಿರುವ ಕೊಳವೆ (ಸೈಫನ್) ಸಮೀಪ ಕೃಷಿಗೆ ಪೂರಕವಾಗಿ ನಿರ್ಮಿಸಲಾಗಿರುವ ಬ್ರಿಟಿಷ್ ಕಾಲದ ಕಾಲುಸೇತುವೆ ಕುಸಿತದ ಭೀತಿ ಎದುರಿಸುತ್ತಿದೆ. ಕಾಲು ಸೇತುವೆ ಮುಖಾಂತರ ಜಾನುವಾರುಗಳನ್ನು ಮೇಯಲು ಮತ್ತು ಕೃಷಿ ಸಲಕರಣೆ ಸಾಗಿಸಲಾಗುತ್ತಿದ್ದು ಕುಸಿದರೆ ಅಪಾಯ ಖಚಿತ ಎಂದರು.
ಕೃಷಿಕ ಕರ್ನಿರೆ ಹರಿಶ್ಚಂದ್ರ ಶೆಟ್ಟಿ ಮಾತನಾಡಿ, ಪರಿಸರದಲ್ಲಿ ಓಬೀರಾಯನ ಕಾಲದ ಕಿಂಡಿ ಅಣೆಕಟ್ಟಿಗೆ ಹಲಗೆ ಹಾಕುವ ಸೂಕ್ತ ವ್ಯವಸ್ಥೆ ಇಲ್ಲದೆ ಉಪ್ಪುನೀರು ಹರಿದು ಎಕರೆಗಟ್ಟಲೆ ಕೃಷಿ ಹಾನಿಯಾಗಿದೆ.
ಕಿಂಡಿ ಆಣೆಕಟ್ಟು ಬಳಿ ದೊಡ್ಡ ಹೊಂಡವಾಗಿದ್ದು ಕುಸಿತದ ಭೀತಿ ಎದುರಿಸುತ್ತಿದೆ ಎಂದರು. ಕೃಷಿಕ ಸ್ಟೀವನ್ ಡಿಸೋಜ ಮಾತನಾಡಿ, ಅಣೆಕಟ್ಟು ಬಳಿ ನೀರಿನ ಒಳಹರಿವು ಸರಾಗವಾಗಿ ಇಲ್ಲದ ಕಾರಣ ಕೃಷಿಗೆ ತೊಂದರೆಯಾಗುತ್ತಿದೆ ಎಂದರು.
ಮಾಜಿ ಪಂ. ಸದಸ್ಯ ಪ್ರಭಾಕರ ಶೆಟ್ಟಿ ಮಾತನಾಡಿ, ಕೂಡಲೇ ಅಣೆಕಟ್ಟು ಕಾಮಗಾರಿ ನಡೆಸಿದ ಗುತ್ತಿಗೆದಾರರು ಕುಸಿದುಹೋಗಿರುವ ಕಾಮಗಾರಿ ಸರಿಪಡಿಸಲು ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.
Kshetra Samachara
24/12/2020 11:28 am