ಮುಲ್ಕಿ: ಮುಲ್ಕಿ ಸಮೀಪದ ಕೊಕ್ರಾಣಿ ಬಳಿಯ ಶಾಂಭವಿ ನದಿ ತೀರದಲ್ಲಿ ಸ್ಥಳೀಯರ ವಿರೋಧದ ನಡುವೆಯೂ ಸುಮಾರು ಐದು ಎಕರೆ ಜಾಗದಲ್ಲಿ ಅಕ್ರಮವಾಗಿ ಕಾಂಡ್ಲಾ ವನ ಕಡಿದು ಮಣ್ಣು ತುಂಬಿಸುವ ಕೆಲಸ ನಡೆಯುತ್ತಿದ್ದು, ನಾಗರಿಕರ ದೂರಿನನ್ವಯ ಅಧಿಕಾರಿಗಳು ಭೇಟಿ ನೀಡಿ ಕಾಮಗಾರಿ ನಿಲ್ಲಿಸಿದ್ದಾರೆ.
ಮುಲ್ಕಿ ಬಳಿಯ ಹೆಜಮಾಡಿ ಗ್ರಾಪಂ ವ್ಯಾಪ್ತಿಯ ಮಟ್ಟು ಸಮೀಪದ ಕೊಕ್ರಾಣಿ ಶಾಂಭವಿ ನದಿತೀರದಲ್ಲಿ ಸ್ಥಳೀಯ ಉದ್ಯಮಿಯೊಬ್ಬರು ಏಕಾಏಕಿ ಸುಮಾರು ಐದು ಎಕರೆ ಜಮೀನು ಪ್ರದೇಶದಲ್ಲಿ ರೆಸಾರ್ಟ್ ಮಾಡುವ ಹುನ್ನಾರ ನಡೆಸಿದ್ದು, ಕಾಮಗಾರಿಯಿಂದ ಪರಿಸರದಲ್ಲಿ ಕೃತಕ ನೆರೆ ಉಂಟಾಗಲಿದೆ ಎಂಬುದು ಸ್ಥಳೀಯರ ಆರೋಪ.
ಅಲ್ಲದೆ, ಜೆಸಿಬಿ ಮೂಲಕ ಮಣ್ಣು ಸಮತಟ್ಟು ಮಾಡುವಾಗ ಅನೇಕ ಕಾಂಡ್ಲಾ ವನ ನಾಶ ಮಾಡಲಾಗಿದೆ. ನಾಗರಿಕರ ದೂರಿನ ಅನ್ವಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಮಂಗಳೂರಿನ ಸಿಆರ್ ಝಡ್ ಹಿರಿಯ ಸಹಾಯಕ ನಿರ್ದೇಶಕ ಮಹೇಶ್ ಕುಮಾರ್ ಮಾತನಾಡಿ, ಶಾಂಭವಿ ನದಿ ತೀರದ ಪ್ರದೇಶದಲ್ಲಿ ಅಕ್ರಮವಾಗಿ ಕಾಂಡ್ಲಾ ವನ ನಾಶ ಮಾಡಿದ್ದು ಗಮನಕ್ಕೆ ಬಂದಿದೆ.
ಇದು ಅಪರಾಧವಾಗಿದ್ದು, ಅಕ್ರಮ ಕಾಮಗಾರಿ ನಿಲ್ಲಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ ಎಂದರು. ಸ್ಥಳೀಯರಾದ ಸುಂದರ ಸುವರ್ಣ ಮಾತನಾಡಿ, ನದಿ ಬದಿ ಅಕ್ರಮವಾಗಿ ಎಕರೆಗಟ್ಟಲೆ ಜಾಗದಲ್ಲಿ ಮಣ್ಣು ತುಂಬಿಸುತ್ತಿದ್ದು, ಕೃತಕ ನೆರೆ ಸೃಷ್ಟಿಯಾಗುವ ಸಾಧ್ಯತೆ ಇದೆ. ಕಳೆದ ಮಳೆಗಾಲದಲ್ಲಿ ಕೂಡ ನೆರೆ ಬಂದಿದ್ದು, ಕೂಡಲೇ ಕಾಮಗಾರಿ ನಿಲ್ಲಿಸಬೇಕೆಂದು ಒತ್ತಾಯಿಸಿದ್ದಾರೆ.
Kshetra Samachara
15/12/2020 09:47 pm