ಉಡುಪಿ: ರಾಜ್ಯ ಸರಕಾರ ತಡೆ ಹಿಡಿದಿರುವ ವಿದ್ಯಾರ್ಥಿಗಳ ವಿವಿಧ ಸ್ಕಾಲರ್ ಶಿಪ್ ಮತ್ತು ಫೆಲೋಶಿಪ್ ತಕ್ಷಣ ಬಿಡುಗಡೆ ಮಾಡಬೇಕು ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಆಗ್ರಹಿಸಿದೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕ್ಯಾಂಪಸ್ ಫ್ರಂಟ್ ಅಫ್ ಇಂಡಿಯಾ ರಾಜ್ಯ ಸಮಿತಿ ಸದಸ್ಯ ರಿಯಾಜ್ ಕಡಂಬು, ಕೊರೊನಾ ಕಾರಣ ನೀಡಿ ಸರಕಾರ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಹಲವಾರು ಫೆಲೋಶಿಪ್, ಸ್ಕಾಲರ್ ಶಿಪ್ ಗಳಿಗೆ ಕತ್ತರಿ ಹಾಕಿದೆ.
ಆದರೆ, ಇನ್ನೊಂದೆಡೆ ಕಾಲೇಜುಗಳು ಮಕ್ಕಳಿಗೆ ಫೀಸ್ ಕಟ್ಟಲು ಬಲವಂತ ಮಾಡುತ್ತಿವೆ. ವಿದ್ಯಾರ್ಥಿಗಳಿಗೆ ಫೀಸ್ ಕಟ್ಟಲು ಕಷ್ಟವಾಗುತ್ತಿದೆ. ಪಿಹೆಚ್‌ಡಿ ಮತ್ತು ಎಂಫಿಲ್ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅಲ್ಪ ಸಂಖ್ಯಾತ ಇಲಾಖೆಯಿಂದ ನೀಡುತ್ತಿರುವ ಫೆಲೋಶಿಪ್ ಕೂಡ ರದ್ದು ಮಾಡಲಾಗಿದೆ. ಇವೆಲ್ಲದರ ವಿರುದ್ಧ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಮಟ್ಟದಲ್ಲಿ ಸ್ಕಾಲರ್ ಶಿಪ್ ನೀಡಿ ಅಭಿಯಾನ ಆರಂಭಿಸಿದೆ. ಇದರ ಭಾಗವಾಗಿ ಉಡುಪಿಯಲ್ಲಿ ನವೆಂಬರ್ ೨೧ ರಂದು ಉಡುಪಿ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನವಾಜ್, ಒಸಾಮ, ಝಮ್ ಝಮ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
19/11/2020 01:20 pm