ಮುಲ್ಕಿ: ಮುಲ್ಕಿ ನಪಂ ವ್ಯಾಪ್ತಿಯಲ್ಲಿ ಕೆಲವು ವರ್ಷಗಳಿಂದಲೂ ವಿದ್ಯುತ್ ಅವ್ಯವಸ್ಥೆ ಕಾಡುತ್ತಿದ್ದು ಸ್ಥಳೀಯ ನಾಗರಿಕರು ಪಂ. ಸದಸ್ಯ ಬಾಲಚಂದ್ರ ಕಾಮತ್ ನೇತೃತ್ವದಲ್ಲಿ ಮುಲ್ಕಿ ಮೆಸ್ಕಾಂ ಗೆ ಮುತ್ತಿಗೆ ಹಾಕಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಸಂದರ್ಭ ಬಾಲಚಂದ್ರ ಕಾಮತ್ ಮಾತನಾಡಿ, ಕಳೆದ ಕೆಲವು ವರ್ಷಗಳಿಂದ ನಪಂ ವ್ಯಾಪ್ತಿಯ ಕಡವಿನ ಬಾಗಿಲು ಬಳಿ ವಿದ್ಯುತ್ ಅವ್ಯವಸ್ಥೆ ಕಾಡುತಿದ್ದು, ಅನೇಕ ಬಾರಿ ಮೆಸ್ಕಾಂ ಗೆ ತಿಳಿಸಿದ್ದರೂ ಸರಿಪಡಿಸಿಲ್ಲ, ವಿದ್ಯುತ್ ಅವ್ಯವಸ್ಥೆಯಿಂದ ಸ್ಥಳೀಯರು ಬಳಲುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಉಷಾ ಮಾತನಾಡಿ, ಪರಿಸರದಲ್ಲಿ ವಿದ್ಯುತ್ ತಂತಿ ತುಂಡಾಗಿ ನೇತಾಡುತ್ತಿದ್ದು ನಾಯಿಯೊಂದು ಬಲಿಯಾಗಿ ದ್ದರೂ ಮೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ವಿದ್ಯುತ್ ಬಿಲ್ ಕಟ್ಟದಿದ್ದರೆ ಕೂಡಲೇ ಕನೆಕ್ಷನ್ ತೆಗೆಯುವ ಸಿಬ್ಬಂದಿ, ದುರಸ್ತಿ ಮಾಡಲು ಮೀನಮೇಷ ಎಣಿಸುತ್ತಿದ್ದಾರೆ ಎಂದರು.
ವಿದ್ಯುತ್ ಬೆಲೆ ಏರಿಸಿ ಗ್ರಾಹಕರ ಮೇಲೆ ಬರೆ ಎಳೆಯುತ್ತಿರುವ ಮೆಸ್ಕಾಂ ಅದೇ ರೀತಿ ಅವ್ಯವಸ್ಥೆ ಸರಿಪಡಿಸಲು ಯಾಕೆ ಮುಂದಾಗುತ್ತಿಲ್ಲ, ಅದೇ ರೀತಿ ಪರಿಸರದಲ್ಲಿ ಸೊಳ್ಳೆಗಳ ಕಾಟ ವಿಪರೀತವಾಗಿದ್ದು ಫಾಗಿಂಗ್ ಮಾಡಲು ಮುಲ್ಕಿ ನಪಂ ಗೆ ದೂರು ನೀಡಲಾಗುವುದು ಎಂದರು. ಗ್ರಾಹಕರ ದೂರಿನ ಬಗ್ಗೆ ಪ್ರತಿಕ್ರಿಯಿಸಿದ ಮುಲ್ಕಿ ಮೆಸ್ಕಾಂ ಅಧಿಕಾರಿ ವಿವೇಕಾನಂದ ಶೆಣೈ ಮಾತನಾಡಿ, ಕಳೆದೆರಡು ದಿನಗಳಿಂದ ಮುಲ್ಕಿ ಸಬ್ ಸ್ಟೇಷನ್ ಹಾಗೂ ಕೇಮಾರು ನಲ್ಲಿ ತಾಂತ್ರಿಕ ದೋಷ ಉಂಟಾದ ಕಾರಣ ವಿದ್ಯುತ್ ವೈಫಲ್ಯ ಉಂಟಾಗಿದೆ. ಮುಂದಿನ ದಿನಗಳಲ್ಲಿ ವಿದ್ಯುತ್ ಅವ್ಯವಸ್ಥೆ ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು.
Kshetra Samachara
17/11/2020 01:23 pm