ಉಡುಪಿ : ನಗರದ ಕರಾವಳಿ ಬೈಪಾಸ್ ಬಳಿಯ ವಸತಿ ಸಮುಚ್ಛಯಕ್ಕೆ ನುಗ್ಗಿದ ಯುವಕನೋರ್ವ ಅಲ್ಲಿನ ಗೇಟು, ಇಂಟರ್‌ಲಾಕ್‌ಗಳನ್ನು ಕಿತ್ತೆಸೆದು ಭಯದ ವಾತಾವರಣ ಸೃಷ್ಟಿಸಿ ಸಾವಿರಾರು ರೂ.ನಷ್ಟವನ್ನುಂಟು ಮಾಡಿದ ಘಟನೆ ನಡೆದಿದೆ.
ದಾಂಧಲೆ ನಡೆಸಿದ ಹಾವೇರಿ ಮೂಲದ ಬಶೀರ್ (24) ಎಂಬಾತನನ್ನು ಸಮಾಜ ಸೇವಕ ವಿಶು ಶೆಟ್ಟಿ ಅವರು ತಮ್ಮ ವಶಕ್ಕೆ ಪಡೆದು ದೊಡ್ಡಣಗುಡ್ಡೆಯ ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಯುವಕ ಬೆಳಗಿನ ಜಾವ ವಸತಿ ಸಮುಚ್ಛಯಕ್ಕೆ ನುಗ್ಗಿ ಜೋರಾಗಿ ಕೂಗಾಡುತ್ತಾ, ಮುಖ್ಯದ್ವಾರದ ಗೇಟನ್ನು ಎತ್ತಿ ಎಸೆದಿದ್ದಾನೆ. ಬಳಿಕ ಅಂಗಳದ ಇಂಟರ್‌ಲಾಕ್, ಟೈಲ್ಸ್ ನ್ನು ಪುಡಿಗಟ್ಟಿದ್ದಾನೆ. ಯುವಕನ ಬೊಬ್ಬೆ, ರೌದ್ರಾವತಾರಕ್ಕೆ ಬೆದರಿದ ಕಟ್ಟಡದ ನಿವಾಸಿಗಳು ಮನೆಯಿಂದ ಹೊರಗೆ ಬಾರದೆ ಮೂಕ ಪ್ರೇಕ್ಷಕರಾಗಿದ್ದರು. ಹೀಗಾಗಿ ಯುವಕನ ದಾಂಧಲೆ ನಿರಾತಂಕವಾಗಿ ಸಾಗಿತ್ತು.
ಕೊನೆಗೆ ವಸತಿ ಸಮುಚ್ಛಯದ ಮಂದಿ ಸಮಾಜ ಸೇವಕ ವಿಶು ಶೆಟ್ಟಿ ಅವರಿಗೆ ಮಾಹಿತಿ ನೀಡಿದಾಗ ಅವರು ಮುಂಜಾನೆ ಸ್ಥಳಕ್ಕೆ ಧಾವಿಸಿದರು. ಆ ಸಂದರ್ಭದಲ್ಲಿ ಯುವಕ ಅರೆ ನಗ್ನಾವಸ್ಥೆಯಲ್ಲಿಯೇ ಕುಳಿತಿರುವುದು ಕಂಡು ಬಂತು. ವಿಶು ಶೆಟ್ಟಿ ಅವರು ಯುವಕನನ್ನು ಮಾತನಾಡಿಸಲು ಮುಂದಾದಾಗ ಆತ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಕೊನೆಗೂ ವಿಶು ಶೆಟ್ಟಿ ಅವರು ಆತನನ್ನು ಶಾಂತಗೊಳಿಸಿ ತಮ್ಮ ಜೀಪ್ ಹತ್ತಿಸಿ ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
Kshetra Samachara
22/09/2022 01:07 pm