ಮಂಗಳೂರು: ನಿಂತಿದ್ದ ಬಸ್ಸೊಂದು ಏಕಾಏಕಿಯಾಗಿ ಹಿಮ್ಮುಖ ಚಲಿಸಲಾರಂಭಿಸಿದ ವೇಳೆ ವಿದ್ಯಾರ್ಥಿಯೊಬ್ಬ ಸಮಯಪ್ರಜ್ಞೆ ಮೆರೆದು ಹಲವರ ಜೀವ ಉಳಿಸಿರುವ ಘಟನೆ ಪುತ್ತೂರು ಬಸ್ ನಿಲ್ದಾಣದಲ್ಲಿ ನಡೆದಿದೆ.
ಪುತ್ತೂರಿನ ಸಂತ ಫಿಲೋಮಿನ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಸಿಝಾನ್ ಹಸನ್ ತನ್ನ ಸಮಯಪ್ರಜ್ಞೆಯಿಂದ ಬಸ್ ನಲ್ಲಿದ್ದವರ ಪ್ರಾಣ ರಕ್ಷಣೆ ಮಾಡಿದ್ದಾನೆ. ಕಾಲೇಜಿನಿಂದ ಮನೆಗೆ ತೆರಳಲೆಂದು ವಿದ್ಯಾರ್ಥಿ ಪುತ್ತೂರು ಬಸ್ಸ್ಟ್ಯಾಂಡ್ಗೆ ಬಂದಿದ್ದ ವೇಳೆ ಪುತ್ತೂರು - ಧರ್ಮಸ್ಥಳ ಎಕ್ಸ್ಪ್ರೆಸ್ ಬಸ್ ಬಂದಿದೆ. ಆಗ ಚಾಲಕ ಮತ್ತು ನಿರ್ವಾಹಕರು ಬಸ್ನಿಂದ ಇಳಿದು ಹೋಗಿದ್ದರು. ಆಗ ಬಸ್ಗೆ ವಿದ್ಯಾರ್ಥಿಗಳು ಹಾಗೂ ಇನ್ನಿತರ ಪ್ರಯಾಣಿಕರು ಹತ್ತಿದ್ದಾರೆ. ಅದಾಗಿ 2 ನಿಮಿಷಗಳಲ್ಲಿ ಬಸ್ ಏಕಾಏಕಿ ಹಿಮ್ಮುಖವಾಗಿ ಚಲಿಸಲಾರಂಭಿಸಿದೆ.
ಈ ವೇಳೆ ಬಸ್ ನಲ್ಲಿದ್ದವರು ಆತಂಕಕ್ಕೆ ಒಳಗಾಗಿದ್ದಾರೆ. ಆದರೆ ಡ್ರೈವರ್ ಹಿಂಭಾಗದ ಸೀಟ್ ನಲ್ಲಿದ್ದ ಸಿಝಾನ್ ಹಸನ್ ತಕ್ಷಣ ಡ್ರೈವರ್ ಸೀಟಿಗೆ ಹೋಗಿ ಬ್ರೇಕ್ ಹಾಕಿದ್ದಾರೆ. ಆಗ ಹಿಮ್ಮುಖ ಸಂಚರಿಸುತ್ತಿದ್ದ ಬಸ್ ನಿಂತಿದೆ. ಆಗ ಅಲ್ಲೆ ಇದ್ದ ಬೇರೆ ಬಸ್ನ ಕಂಡಕ್ಟರ್ ಬಸ್ ಹತ್ತಿ ಹ್ಯಾಂಡ್ ಬ್ರೇಕ್ ಹಾಕಿದ್ದಾರೆ.
ತಂದೆ ಚಲಾಯಿಸುತ್ತಿದ್ದ ಕಾರನ್ನು ನೋಡಿ ಅದರ ಬ್ರೇಕ್ ಬಗ್ಗೆ ತಿಳಿದಿದ್ದ ಸಿಝಾನ್ ಹಸನ್ ಗೆ ಬಸ್ ಹಿಮ್ಮುಖವಾಗಿ ಚಲಿಸುತ್ತಿದ್ದ ವೇಳೆ ಬ್ರೇಕ್ ಹಾಕಲು ಅನುಕೂಲವಾಗಿದೆ. ಸಿಝಾನ್ ಹಸನ್ ಸಮಯಪ್ರಜ್ಞೆ ಮೆರೆದು ಭಾರೀ ಅನಾಹುತ ತಪ್ಪಿದಂತಾಗಿದೆ. ಈ ಮೂಲಕ ಆತ ಎಲ್ಲರ ಶ್ಲಾಘನೆಗೆ ಪಾತ್ರನಾಗಿದ್ದಾನೆ.
Kshetra Samachara
18/09/2022 01:16 pm