ಪುತ್ತೂರು : ಸುದೀರ್ಘ ಮೂವತ್ತೈದು ವರ್ಷಗಳ ಕಾಲ ನಾನಾ ಪತ್ರಿಕೆಗಳಲ್ಲಿ ಕೆಲಸ ಮಾಡಿದ ಪುತ್ತೂರಿನ ಹಿರಿಯ ಪತ್ರಕರ್ತ ಬಿ. ಟಿ. ರಂಜನ್ (60) ಶನಿವಾರ ಮುಂಜಾನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೂರು ದಿನಗಳಿಂದ ಜ್ವರ ಹಾಗೂ ಕೆಮ್ಮು ಸಮಸ್ಯೆಯಿಂದ ಬಳಲುತ್ತಿದ್ದ ಅವರು ಗುರುವಾರ ರಾತ್ರಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಶುಕ್ರವಾರ ಬೆಳಗ್ಗೆ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಮಧ್ಯಾಹ್ನ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಶನಿವಾರ ನಸುಕಿನ ಜಾವ ಅವರು ಇಹಲೋಕ ತ್ಯಜಿಸಿದರು. ಮೃತರಿಗೆ ಪತ್ನಿ, ಪುತ್ರಿ ಇದ್ದಾರೆ.
ಉಪ್ಪಿನಂಗಡಿ ರಥ ಬೀದಿಯ ನಿವಾಸಿಯಾಗಿರುವ ರಂಜನ್ ಅವರು, ಮುಂಗಾರು ಪತ್ರಿಕೆಯ ಮೂಲಕ ತಮ್ಮ ಪತ್ರಿಕಾ ವೃತ್ತಿ ಆರಂಭಿಸಿದ್ದರು. ಬಳಿಕ ಮಂಗಳೂರು ಮಿತ್ರ ಪತ್ರಿಕೆಯಲ್ಲಿ ದುಡಿದು ನಂತರ ಉದಯವಾಣಿ ಪತ್ರಿಕೆಯ ಪುತ್ತೂರು ವರದಿಗಾರರಾಗಿ 27 ವರ್ಷ ಸೇವೆ ಸಲ್ಲಿಸಿದ್ದರು. ಕಳೆದ 4 ವರ್ಷಗಳಿಂದ ಹೊಸದಿಗಂತ ಪತ್ರಿಕೆಯ ಪುತ್ತೂರು ವರದಿಗಾರರಾಗಿದ್ದು, ಗುರುವಾರದವರೆಗೂ ಕೆಲಸ ಮಾಡಿದ್ದರು.
1996ರಲ್ಲಿ ಸ್ಥಾಪನೆಯಾದ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ನಿರಂತರ ಸಂಘದ ಗೌರವ ಸಲಹೆಗಾರರಾಗಿದ್ದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಡಾ. ಶಿವರಾಮ ಕಾರಂತರ ಬಾಲವನ ಪುರಸ್ಕಾರಕ್ಕೆ ಭಾಜನರಾಗಿದ್ದರು.
Kshetra Samachara
05/02/2022 09:48 am