ಮಂಗಳೂರು: ಪದ್ಮಶ್ರೀ ಪುರಸ್ಕೃತ 'ಅಕ್ಷರ ಸಂತ' ಹರೇಕಳ ಹಾಜಬ್ಬ ಅವರ ನ್ಯೂಪಡ್ಪುವಿನಲ್ಲಿರುವ ಮನೆಗೆ ಇಂದು ಅಂಕೋಲಾ ತಾಲೂಕಿನ ಪರಿಸರ ಪ್ರೇಮಿ, ಪದ್ಮಶ್ರೀ ಪುರಸ್ಕೃತೆ 'ವೃಕ್ಷ ಮಾತೆ' ಖ್ಯಾತಿಯ ತುಳಸಿ ಗೌಡ ಭೇಟಿ ನೀಡಿದರು.
ಸೊಸೆ ಹಾಗೂ ಮೊಮ್ಮಕ್ಕಳೊಂದಿಗೆ ಭೇಟಿ ನೀಡಿದ ತುಳಸಿ ಗೌಡ ಅವರನ್ನು ಹಾಜಬ್ಬ ಆತ್ಮೀಯವಾಗಿ ಸ್ವಾಗತಿಸಿ, ಗೌರವಿಸಿದರು. ಈ ವೇಳೆ ಇಬ್ಬರು ಜೊತೆಯಾಗಿ ಉಪಾಹಾರ ಸೇವಿಸಿದರು.
ಬಳಿಕ ತುಳಸಿ ಗೌಡ ಅವರು ಹಾಜಬ್ಬರ ಕನಸಿನ ಶಾಲೆಗೂ ಭೇಟಿ ನೀಡಿದರು. ಅವರನ್ನು ವಿದ್ಯಾರ್ಥಿಗಳು ಆದರದಿಂದ ಬರಮಾಡಿಕೊಂಡರು. ಇದೇ ವೇಳೆ 'ವೃಕ್ಷ ಮಾತೆ' ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಈ ಸಂದರ್ಭ ಮಾತನಾಡಿದ ಹಾಜಬ್ಬ, "ತುಳಸಿ ಗೌಡ ಅವರು ಈ ಬಡವನ ಮನೆಗೆ ಭೇಟಿ ನೀಡಿರುವುದು ನನ್ನ ಪುಣ್ಯ. ಮೊನ್ನೆ ದಿಲ್ಲಿಯಲ್ಲಿ ಹಾಗೂ ವಿಮಾನ ನಿಲ್ದಾಣದಲ್ಲಿ ಅವರನ್ನು ಭೇಟಿಯಾದರೂ ಮಾತುಕತೆಗೆ ಸರಿಯಾದ ಅವಕಾಶ ದೊರೆತಿರಲಿಲ್ಲ" ಎಂದರು.
ತುಳಸಿ ಗೌಡ ಮಾತನಾಡಿ, "ಹಾಜಬ್ಬರನ್ನು ಮೊನ್ನೆ ಸರಿಯಾಗಿ ಭೇಟಿಯಾಗಲು ಸಾಧ್ಯವಾಗದೆ ಇದೀಗ ಅವರನ್ನು ಹುಡುಕಿಕೊಂಡು ಇಲ್ಲಿಗೆ ಬಂದಿದ್ದೇನೆ. ಹಾಜಬ್ಬರು ಸಮಾಜಕ್ಕೆ ಇನ್ನಷ್ಟು ಕೊಡುಗೆ ನೀಡಬೇಕು" ಎಂದರು.
Kshetra Samachara
13/11/2021 03:28 pm