ಮಂಗಳೂರು: ನಗರದ ಗೂಡ್ಸ್ ಶೆಡ್ ರೈಲ್ವೆ ನಿಲ್ದಾಣದ ಒಳಗಡೆ ವ್ಯಕ್ತಿಯೋರ್ವರ ಮೃತದೇಹ ನಿನ್ನೆ ಪತ್ತೆಯಾಗಿತ್ತು. ಆದರೆ, ರೈಲ್ವೆ ಹಾಗೂ ಪಾಂಡೇಶ್ವರ ಪೊಲೀಸರು ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಮೃತದೇಹದ ವಿಲೇವಾರಿ ಮಾಡದೆ ಅಲ್ಲಿಯೇ ಬಿಟ್ಟಿರೋದು ಸ್ಥಳೀಯರ ಆಕ್ರೋಶಕ್ಕೆ ಗುರಿಯಾಗಿತ್ತು.
ಬಳಿಕ ಸಾಮಾಜಿಕ ಕಾರ್ಯಕರ್ತ ಆಪತ್ಪಾಂಧವ ಆಸೀಫ್ ಅವರ ಒತ್ತಡಕ್ಕೆ ಮಣಿದ ಪೊಲೀಸರು ಮೃತದೇಹವನ್ನು ಕೊನೆಗೂ ವಿಲೇವಾರಿ ಮಾಡಿದ್ದಾರೆ.
ಇದು ಸಹಜ ಸಾವು ಆಗಿರದೆ ಕೊಲೆಯಾಗಿರುವ ಸಾಧ್ಯತೆ ಇದೆ ಎಂಬ ಶಂಕೆಯೂ ವ್ಯಕ್ತವಾಗಿದೆ. ಮೊನ್ನೆ ರಾತ್ರಿಯೇ ಈ ಕೊಲೆ ನಡೆದಿದ್ದು, ಗೂಡ್ಸ್ ಶೆಡ್ ರೈಲ್ವೆ ವಿಭಾಗದ ಒಳಗಡೆಯೇ ಮೃತದೇಹ ಪತ್ತೆಯಾಗಿತ್ತು. ಅದಲ್ಲದೆ, ಮೃತದೇಹದ ಮೇಲೆ ನೊಣ, ಇರುವೆಗಳು ಹರಿದಾಡುತ್ತಿತ್ತು. ಆದರೆ, ಪಾಂಡೇಶ್ವರ ಪೊಲೀಸ್ ಠಾಣೆ ಹಾಗೂ ರೈಲ್ವೆ ವಿಭಾಗದ ಪೊಲೀಸರ ನಡುವಿನ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ತಿಕ್ಕಾಟದಿಂದಾಗಿ ಶವ ವಿಲೇವಾರಿ ಆಗದೆ ಅಲ್ಲಿಯೇ ಅನಾಥವಾಗಿ ಬಿದ್ದಿತ್ತು.
ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ 'ಆಪತ್ಪಾಂಧವ' ಖ್ಯಾತಿಯ ಆಸೀಫ್ ಅವರು ಈ ಬಗ್ಗೆ ಫೇಸ್ ಬುಕ್ ಲೈವ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು. ಇವರ ಒತ್ತಡ, ಸಾಮಾಜಿಕ ಕಾಳಜಿಗೆ ಮಣಿದ ರೈಲ್ವೆ ಪೊಲೀಸರು, ಶವ ವಿಲೇವಾರಿ ಮಾಡಿ ಅಸಹಜ ಸಾವು ಎಂದು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.
Kshetra Samachara
19/02/2021 02:39 pm