ಉಡುಪಿ: ಚಿಕಿತ್ಸೆ ಪಡೆಯಲು ಸಹಕರಿಸುವರು ಇಲ್ಲದೆ, ಮನೆಯಲ್ಲಿ ಗಂಭೀರ ಸ್ಥಿತಿಯಲ್ಲಿ ದಿನಗಳ ಕಳೆಯುತ್ತಿದ್ದ ಅಸಹಾಯಕ ಮಹಿಳೆಯನ್ನು ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ರಕ್ಷಿಸಿ, ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿ ಮಾನವಿಯತೆ ಮೆರೆದ ಘಟನೆ ಬುಧವಾರ ನಡೆದಿದೆ. ಮಹಿಳೆಯ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಸಂಬಂಧಿಕರು ಅಥವ ಸಂಬಂಧಪಟ್ಟವರು ಜಿಲ್ಲಾಸ್ಪತ್ರೆಯ ನಾಗರಿಕ ಸಹಾಯ ಕೆಂದ್ರವನ್ನು ಸಂಪರ್ಕಿಸಲು ಸೂಚಿಸಲಾಗಿದೆ.
ಪಡುಬಿದ್ರೆ ನಡ್ಸಾಲು ಗ್ರಾಮದ ಹಳೆ ಕೆ.ಇ.ಬಿ ಕಛೇರಿ ರಸ್ತೆ ನಿವಾಸಿ ಸುಂದರಿ ದೇವಾಡಿಗ (57ವ) ಅವರು, ಕಳೆದ ಎರಡು ತಿಂಗಳುಗಳಿಂದ ಅನಾರೋಗ್ಯಕ್ಕೆ ತುತ್ತಾಗಿ ಹಾಸಿಗೆಯಲ್ಲಿ ದಿನಗಳ ಕಳೆಯುತ್ತಿದ್ದರು. ಶೌಚಾದಿ ಕ್ರಿಯೆಗಳು ಹಾಸಿಗೆಯಲ್ಲಿ ನಡೆಸುತ್ತಿದ್ದರು. ಮನೆ ಸನಿಹದ ನಿವಾಸಿಗಳು ಒದಗಿಸಿದ ತಿಂಡಿ ತಿನಿಸುಗಳು ಇವರಿಗೆ ಉದರ ಹಸಿವಿಗೆ ಆಹಾರವಾಗಿತ್ತು. ಮಕ್ಕಳಿಲ್ಲದ ವಿಧವೆಯಾಗಿರುವ ಸುಂದರಿ ದೇವಾಡಿಗ ಅವರು, ಮಾನಸಿಕ ಅಸ್ವಸ್ಥ ಸಹೋದರಿಯೊಂದಿಗೆ ಜೀವನ ಸಾಗಿಸಿಕೊಂಡಿದ್ದರು. ಮಹಿಳೆಯ ನರಕಯಾತನೆ ಗಮನಿಸಿದ ಸ್ಥಳಿಯ ರಮೇಶ್ ಅವರು ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರಿಗೆ ಮಾಹಿತಿ ನೀಡಿದ್ದರು.
ಮಲ ಮೂತ್ರಗಳಿಂದ ದುರ್ನಾತ ಹೊಡೆಯುತ್ತಿದ್ದ ಹಾಸಿಗೆಯಲ್ಲಿ ತಿಂಗಳುಗಳಿಂದ ಮಲಗಿಕೊಂಡಿದ್ದ ಸುಂದರಿ ದೇವಾಡಿಗ ಅವರನ್ನು ಉಡುಪಿಯಿಂದ ಖಾಸಗಿ ಅಂಬುಲೇನ್ಸ್ ಮೂಲಕ ಪಡುಬಿದ್ರೆಗೆ ಬಂದ ವಿಶು ಶೆಟ್ಟಿ ಅವರು ರಕ್ಷಿಸಿ, ಉಡುಪಿಗೆ ಕರೆತಂದು, ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿದ್ದಾರೆ. ಕಾರ್ಯಚರಣೆಗೆ ಸಾಮಾಜಿಕ ಕಾರ್ಯಕರ್ತ ತಾರಾನಾಥ್ ಮೇಸ್ತ ಶಿರೂರು ಅವರು ಸಹಕರಿಸಿದ್ದರು.
ನಾಗರಿಕ ಸಮಾಜದಲ್ಲಿ ಅಸಹಾಯಕತೆ ಎದುರಾದಗ, ತುರ್ತಾಗಿ ಸ್ಪಂದಿಸಲು, ಸರಕಾರವು ಹಲವಾರು ಇಲಾಖೆ- ಸಂಸ್ಥೆಗಳನ್ನು ರೂಪಿಸಿದೆ. ಪಡುಬಿದ್ರೆ ನರ್ಸಾಲು ಗ್ರಾಮದ ಸುಂದರಿ ದೇವಾಡಿಗ ಬಡ ಮಹಿಳೆಯೊರ್ವರು ಅನಾರೋಗ್ಯದ ಕಾರಣದಿಂದ, ಅಸಹಾಯಕರಾಗಿ ಹಾಸಿಗೆಯಲ್ಲಿ ದಿನಗಳ ಕಳೆಯುತ್ತಿರುವ ಬಗ್ಗೆ ಸಂಬಂಧಪಟ್ಟವರಿಗೆ ಮಾಹಿತಿ ನೀಡಲಾಯಿತು. ಆದರೆ ಸ್ಪಂದಿಸುವ ಜವಬ್ದಾರಿ ಹೊತ್ತವರಿಂದ ಸ್ಪಂದನೆ ದೊರೆಯಲಿಲ್ಲ. ಬದುಕ ಬೇಕಾದ ಜೀವಗಳು ಜೀವ ಕಳೆದುಕೊಳ್ಳಬೇಕಾದ ಪರಿಸ್ಥಿತಿ ನಾಗರಿಕ ಸಮಾಜದಲ್ಲಿ ಉದ್ಬವವಾಗಿದೆ ಎನ್ನುವುದು ವಿಶು ಶೆಟ್ಟಿ ನೋವು.
Kshetra Samachara
04/02/2021 03:52 pm