ಮಂಗಳೂರು: ಇತ್ತೀಚಿಗೆ ವಿದ್ಯಾರ್ಥಿಯೊಬ್ಬ ನಗರದ ಕಂಕನಾಡಿಯ ಹೂವಿನ ಮಾರುಕಟ್ಟೆಯ ಬಳಿಯ ರಸ್ತೆಯಂಚಿನಲ್ಲಿದ್ದ ಗುಂಡಿಯನ್ನು ಒಂದೊಂದೇ ಕಲ್ಲನ್ನು ಹಾಕಿ ಮುಚ್ಚುವ ಪ್ರಯತ್ನಕ್ಕೆ ಇದೀಗ ಫಲ ದೊರಕಿದಂತಾಗಿದೆ.
ನಗರದ ಎಕ್ಕೂರು ಕೇಂದ್ರೀಯ ವಿದ್ಯಾಲಯದ 7ನೇ ತರಗತಿಯ ವಿದ್ಯಾರ್ಥಿ ಮೊಹಮ್ಮದ್ ಅರ್ಹಮ್ ಕಾಂಕ್ರೀಟ್ ರಸ್ತೆಯ ಪಕ್ಕದಲ್ಲಿನ ಹೊಂಡವನ್ನು ಒಂದೊಂದೇ ಕಲ್ಲನ್ನು ಹೆಕ್ಕಿ ತಂದು ಹೊಂಡವನ್ನು ಮುಚ್ಚುವ ಪ್ರಯತ್ನ ಮಾಡಿದ್ದ. ಈತನ ಈ ಪ್ರಯತ್ನಕ್ಕೆ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗಿತ್ತು. ಈ ರಸ್ತೆಯಲ್ಲಿ ಸಂಚರಿಸುವ ವಿದ್ಯಾರ್ಥಿಗಳು, ಪಾದಚಾರಿಗಳು ಹೊಂಡ ಗಮನಿಸದೆ ಹೊಂಡಕ್ಕೆ ಬೀಳುತ್ತಿದ್ದರು. ಅಲ್ಲದೆ ದ್ವಿಚಕ್ರ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದರು.
ಇದನ್ನು ಗಮನಿಸುತ್ತಿದ್ದ ಬಾಲಕ ಹೊಂಡವನ್ನು ಮುಚ್ಚುವ ಪ್ರಯತ್ನ ಮಾಡಿದ್ದ. ಇದೀಗ ಈ ಹೊಂಡವನ್ನು ಕಲ್ಲು, ಜಲ್ಲಿಹುಡಿ ಕಲ್ಲುಗಳನ್ನು ಹಾಕಿ ಮುಚ್ಚಲಾಗಿದೆ. ಬಾಲಕನ ಪ್ರಯತ್ನವು ಫಲ ನೀಡಿದ್ದು, ರಸ್ತೆ ಗುಂಡಿಯಿಂದ ಅನುಭವಿಸುವ ತೊಂದರೆಗೆ ಪರಿಹಾರ ದೊರಕಿದಂತಾಗಿದೆ.
Kshetra Samachara
23/08/2022 04:52 pm