ವಿಶೇಷ ವರದಿ: ರಹೀಂ ಉಜಿರೆ
ಕುಂದಾಪುರ: ಕಲಾವಿದನ ಅದೃಷ್ಟವನ್ನೇ ಬದಲಾಯಿಸಿದೆ ಟೈಂಪಾಸ್ಗಾಗಿ ಮಾಡಿದ ಕಲೆ.. ಪ್ರಯಾಣಿಕರು ಬೆರಗಾಗುವಂತೆ ಮಾಡಿದೆ ಹೊಸ ಪರಿಕಲ್ಪನೆ.. ಮಕ್ಕಳ ಶಿಕ್ಷಣಕ್ಕೆ ಪೂರಕವಾಗಿದೆ ನೂತನ ಯೋಜನೆ..
ಹೌದು ಹೊರ ಪ್ರಪಂಚಕ್ಕೆ ಇದು ಕೇವಲ KSRTC ಬಸ್, ಆದ್ರೆ ವಿದ್ಯಾರ್ಥಿಗಳ ಪಾಲಿಗೆ ಇದುವೇ ಜ್ಞಾನ ದೇಗುಲ. ಜ್ಞಾನದ ಹಸಿವನ್ನು ನೀಗಿಸುವ ಅಕ್ಷರ ಮಂದಿರ. ಇದರ ಹಿಂದಿನ ರೂವಾರಿ ಕಲಾವಿದ ಪ್ರಶಾಂತ್ ಆಚಾರ್ಯ.. ಮೊದಲ ಲಾಕ್ ಡೌನ್ ಸಂದರ್ಭ ಮನೆಯಲ್ಲೇ ಇದ್ದ ಪ್ರಶಾಂತ್, ಫಾರ್ಮ್ ಶೀಟ್ ಬಳಸಿ, ಕೆಎಸ್‌ಆರ್ಟಿಸಿ ಬಸ್ ನ ಮಾದರಿಯೊಂದನ್ನು ತಯಾರು ಮಾಡಿದ್ರು. ಇದು ಬಹಳ ಮೆಚ್ಚುಗೆಗೂ ಪಾತ್ರವಾಗಿತ್ತು. ಬಳಿಕ ಈ ಕಲಾವಿದ ಸಾರಿಗೆ ಸಚಿವರಲ್ಲಿ ಹಳೆಯ ,ಉಪಯೋಗಕ್ಕೆ ಬಾರದ ಕೆಎಸ್ ಆರ್ ಟಿಸಿ ಬಸ್ ನೀಡಿದರೆ ಹೊಸ ಯೋಜನೆಯೊಂದನ್ನು ಕಾರ್ಯರೂಪಕ್ಕೆ ತರುವುದಾಗಿ ಮನವಿ ಮಾಡಿದ್ರು. .ಇವರ ಮನವಿಗೆ ಸ್ಪಂದಿಸಿದ ಸಚಿವರು ,ಇವರಿಗೊಂದು ಗುಜರಿ ಬಸ್ ನೀಡಿದ್ರು. ಸದ್ಯ ಇದೇ ಬಸ್‌ನ್ನು ತನ್ನ ಕನಸಿನಂತೆ ಸರ್ಕಾರಿ ಶಾಲೆಯ ಸ್ಮಾರ್ಟ್ ಕ್ಲಾಸ್ ಆಗಿ ಹೊಸ ರೂಪ ನೀಡಿದ್ದಾರೆ ಪ್ರಶಾಂತ್ ಆಚಾರ್ಯ..
ಸುಮಾರು 25 ವಿದ್ಯಾರ್ಥಿಗಳು ಈ ಬಸ್ ನಲ್ಲಿ ಕೂತು ಪಾಠ ಕೇಳಬಹುದು. ಒಳಗಡೆ ಪ್ರಾಜೆಕ್ಟ್ ವ್ಯವಸ್ಥೆ ಇದೆ. ಸ್ವಾತಂತ್ರ್ಯ ಹೋರಾಟಗಾರರು, ಸಾಹಿತಿಗಳ ಭಾವಚಿತ್ರಗಳನ್ನು ಅಂಟಿಸಿ ಕ್ಲಾಸ್ ರೂಮ್ ರೀತಿಯಲ್ಲೇ ಸಜ್ಜುಗೊಳಿಸಲಾಗಿದೆ. ಅಲ್ಲದೇ ಸಾಹಿತ್ಯ ಪುಸ್ತಕಗಳನ್ನು ಬಸ್ ನ ಒಳಗಡೆ ಇಡಲಾಗಿದೆ.ಒಟ್ಟಾರೆ ವಿದ್ಯಾರ್ಥಿಗಳಿಗೆ ಬಸ್‌ನೊಳಗೆ ಕೂತು ಪಾಠ ಕೇಳೋದು ಹೊಸ ಅನುಭವ.
ಅಂದಹಾಗೆ ಈ ವಿನೂತನ ಕೆಎಸ್ ಆರ್ ಟಿಸಿ ಸ್ಮಾರ್ಟ್ ಕ್ಲಾಸ್ ಇದೇ ಶನಿವಾರ ಲೋಕಾರ್ಪಣೆಯಾಗಲಿದೆ. ಸಚಿವರು ಇದನ್ನು ಉದ್ಘಾಟಿಸಲಿದ್ದಾರೆ. ಒಟ್ಟಾರೆ ಕಲಾವಿದನ ಪರಿಕಲ್ಪನೆಯೊಂದು ವಿನೂತನ ರೀತಿಯಲ್ಲಿ ಸಾಕಾರಗೊಳ್ಳುತ್ತಿರುವುದು ಕುಂದಾಪುರದ ಜನತೆಗೆ ರೋಮಾಂಚನವುಂಟುಮಾಡಿದೆ.
ರಹೀಂ ಉಜಿರೆ, ಪಬ್ಲಿಕ್ ನೆಕ್ಸ್ಟ್, ಉಡುಪಿ
PublicNext
09/03/2022 04:00 pm