ವರದಿ: ರಹೀಂ ಉಜಿರೆ
ಶಂಕರಪುರ: ಅವರೆಲ್ಲ 1985ರಲ್ಲಿ ಪ್ರೌಢ ಶಾಲೆಯಲ್ಲಿ ಒಟ್ಟಿಗೇ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳು.ಮೂವತ್ತೈದು ವರ್ಷಗಳ ಬಳಿಕ ಮತ್ತೆ ತಾವೆಲ್ಲ ಒಂದಾಗಬೇಕು ಎಂಬ ಆಸೆ ಚಿಗುರೊಡೆಯಿತು.ಹೀಗಾಗಿ ಸಾಮಾಜಿಕ ಜಾಲತಾಣವನ್ನೇ ಮಾಧ್ಯಮವನ್ನಾಗಿಸಿ, ಮತ್ತೆ ಒಂದಾದರು! ಮತ್ತದೇ ಕ್ಲಾಸ್‌ನಲ್ಲಿ ಕೂತು, ಅಂದಿನ ಅಧ್ಯಾಪಕರ ಪಾಠ ಕೇಳಿದರು, ಹಾಡು ಹಾಡಿದರು, ನೃತ್ಯ ಮಾಡಿದರು... ಇಂತಹ ಸುಮಧುರ ಕ್ಷಣಕ್ಕೆ ಸಾಕ್ಷಿ ಆದದ್ದು ಸಮ್ಮಿಲನ ಎನ್ನುವ ವಿಶೇಷ ಕಾರ್ಯಕ್ರಮ.
ಇದು ಉಡುಪಿಯ ಶಂಕರಪುರ ಸೈಂಟ್ ಜೋನ್ಸ್ ಪ್ರೌಢಶಾಲೆಯಲ್ಲಿ 1985 ರಿಂದ 1988ರ ವರ್ಷದ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮದ ದೃಶ್ಯ. ಹೈಸ್ಕೂಲ್ ಬಿಟ್ಟು ಮೂವತ್ತು ವರ್ಷವಾಗಿದ್ದ ಇವರಿಗೆ ಮತ್ತೆ ಎಲ್ಲರೂ ಒಂದಾಗಬೇಕು ಎಂಬ ಆಸೆ ಚಿಗುರೊಡೆಯಿತು. ಹೀಗಾಗಿ ಅಂದಿನ ವಿದ್ಯಾರ್ಥಿಗಳು ವಾಟ್ಸ್ ಆಫ್ ಗ್ರೂಪ್ ಮಾಡಿ ಅದರಲ್ಲಿ ಎಲ್ಲರನ್ನೂ ಒಂದಾಗಿಸಿ, ಚರ್ಚಿಸಿ ಇಂತಹ ಉತ್ತಮ ಕಾರ್ಯಕ್ರಮ ರೂಪಿಸಿದರು.ಒಟ್ಟಾದರು.
ಅಂದು ಇವರಿಗೆ ಪಾಠ ಮಾಡಿದ್ದ ಗುರುಗಳನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಗುರುಗಳ ಪಾಠವನ್ನು ತರಗತಿಯಲ್ಲಿ ವಿದ್ಯಾರ್ಥಿಗಳಂತೆ ಕೂತು ಆಲಿಸಿದರು. ಮಧ್ಯೆ ಮಧ್ಯೆ ತುಂಟಾಟ, ಚೇಷ್ಟೆ ತಮಾಷೆ ಮಾಡಿ ಖುಷಿ ಪಟ್ಟರು. ಹಾಡು ಹಾಡಿ, ನೃತ್ಯ ಮಾಡುವುದರ ಜೊತೆಗೆ ಗುರುಗಳನ್ನು ಸಮ್ಮಾನಿಸಿ ಕಾರ್ಯಕ್ರಮ ಸಾರ್ಥಕಗೊಳಿಸಿದರು.
ಏನೇ ಹೇಳಿ, ಹಳೆಯ ಶಾಲಾ ದಿನಗಳ ನೆನಪುಗಳೇ ಸುಂದರ, ಸುಮದುರ.ಅಂತಹ ದಿನಗಳನ್ನು ಬಾಲ್ಯ ಸ್ನೇಹಿತರು ಮತ್ತೆ ಒಂದಾಗಿ, ಒಟ್ಟಾಗಿ ಸೇರಿ ಮೆಲುಕು ಹಾಕಿದ್ದು ಅವಿಸ್ಮರಣೀಯ!
PublicNext
10/01/2022 07:33 pm