ಉಡುಪಿ: ಹೌದು ...ಕಳೆದ ಎಂಟು ತಿಂಗಳುಗಳಿಂದ ಎಲ್ಲೂ ದೂರ ಹೋಗದ ಜನ ನಿಧಾನವಾಗಿ ಪ್ರವಾಸಕ್ಕೆ ತೆರಳುತ್ತಿದ್ದಾರೆ.ಅದರಲ್ಲೂ ರಾಜ್ಯದ ಮೂಲೆಮೂಲೆಯ ಜನ ಪ್ರವಾಸ ಎಂದಾಗ ಮೊದಲು ಆಯ್ಕೆ ಮಾಡುವುದು ಉಡುಪುಯನ್ನು.ಯಾಕೆಂದರೆ ಉಡುಪಿಗೆ ಬಂದರೆ ಕೃಷ್ಣಮಠ ಸಹಿತ ಪುಣ್ಯಕ್ಷೇತ್ರಗಳೂ ಇವೆ ,ಇನ್ನೊಂದು ಕಡೆಯಿಂದ ಬೀಚ್ ,ಐಲ್ಯಾಂಡುಗಳೂ ಇಲ್ಲಿವೆ.
ಇದೇ ಕಾರಣಕ್ಕೆ ಪ್ರವಾಸಿಗರ ಸ್ವರ್ಗ ತಾಣವಾಗಿರುವ ಉಡುಪಿಗೆ ಲಕ್ಷಾಂತರ ಮಂದಿ ಪ್ರವಾಸಿಗರು ಬರುತ್ತಿದ್ದಾರೆ. ಇತ್ತೀಚೆಗೆ ಇಲ್ಲಿನ ಪ್ರವಾಸಿ ತಾಣಗಳು ಅಭಿವೃದ್ಧಿ ಹೊಂದುತ್ತಾ ಮತ್ತಷ್ಟು ಪ್ರವಾಸಿಗರನ್ನು ಸೆಳೆಯುತ್ತಿವೆ.
ಉಡುಪಿಗೆ ಬರುವ ಪ್ರವಾಸಿಗರು ಮಲ್ಪೆ ಸೀ ವಾಕ್ ಮಾತ್ರ ಮಿಸ್ ಮಾಡಲು ಸಾಧ್ಯವೇ ಇಲ್ಲ.ಸಂಜೆ ವೇಳೆ ಸೀವಾಕ್‍ನಲ್ಲಿ ನಡೆದಾಡೋ ಖುಷಿ ಬೇರೆಲ್ಲೂ ಸಿಗದು.
ಮಲ್ಪೆ ಬಂದರಿನ ತುದಿಯಲ್ಲಿರುವ ಸೀವಾಕ್, ವಾಕ್ ಪ್ರಿಯರು ಮತ್ತು ಸೂರ್ಯಾಸ್ತ ಪ್ರಿಯರ ಹಾಟ್ ಸ್ಪಾಟ್ ಎನಿಸಿದೆ.ಕತ್ತಲು ಕವಿಯುವ ಸಮಯಕ್ಕೆ ಬಂದರೆ ಸಮುದ್ರದ ದಂಡೆಯಲ್ಲಿ ತಂಪಾದ ಗಾಳಿಯೊಂದಿಗೆ ಒಂದಷ್ಟು ವಾಕ್ ಮಾಡಬಹುದು.ವಾಕ್ ಮಾಡುತ್ತಾ ಮಾಡುತ್ತಾ ಸೂರ್ಯಾಸ್ತವನ್ನೂ ಸವಿಯಬಹುದು.ಹೀಗಾಗಿ ಬಿಸಿಲೇರುತ್ತಿದ್ದಂತೆಯೇ ಪ್ರವಾಸಿಗರ ದಂಡೇ ಇತ್ತ ಕಡೆ ಮುಖ ಮಾಡಿದೆ.
ಸೀ ವಾಕ್ ಗೆ ಹೊಂದಿಕೊಂಡು ಉದ್ಯಾನವನ ಇದ್ದು ಮನಸಿಗೆ ಮುದ ನೀಡುತ್ತಿದೆ.ವಿವಿಧ ಜಾತಿಯ ಹೂ ಗಿಡಗಳು, ಲೈಟ್‍ಗಳು, ಜಟಾಯು ಪಕ್ಷಿ, ದೋಣಿ ದಡಕ್ಕೆ ಎಳೆಯುವುದು, ಆಮೆ,ಕಾಪು ಲೈಟ್ ಹೌಸ್ ಕಲಾಕೃತಿಗಳು ಪ್ರವಾಸಿಗರಿಗೆ ಸಂಪೂರ್ಣ ಮನರಂಜನೆ ಮತ್ತು ಮುದ ನೀಡುತ್ತಿವೆ.
Kshetra Samachara
10/12/2020 07:19 pm