ಇರ್ಷಾದ್ ಕಿನ್ನಿಗೋಳಿ, ಪಬ್ಲಿಕ್ ನೆಕ್ಸ್ಟ್, ಮಂಗಳೂರು
ಮಂಗಳೂರು: ಕೊರೊನಾ ಲಾಕ್ ಡೌನ್ ಅನ್ನೋದು ಮಕ್ಕಳ ಶೈಕ್ಷಣಿಕ ಪ್ರಗತಿಯ ಮೇಲೆ ಪರಿಣಾಮ ಬೀರಿರಬಹುದು. ಆದರೆ ಮಕ್ಕಳ ಒಂದಿಷ್ಟು ಖುಷಿ, ಪ್ರತಿಭೆಗೆ ಇದೊಂದು ಒಳ್ಳೆಯ ವೇದಿಕೆಯನ್ನ ಒದಗಿಸಿದೆ ಅಂದ್ರೆ ತಪ್ಪಾಗದು. ಕೇವಲ ನಾಲ್ಕು ಗೋಡೆಗಳ ಮಧ್ಯೆ ಶಿಕ್ಷಣದ ಸರಕಾಗಿದ್ದ ಮಕ್ಕಳು ಪ್ರಕೃತಿ ಜೊತೆಗಿನ ಆಟ, ವಿನೋದಾವಳಿಗಳನ್ನ ಈ ಅವಧಿಯಲ್ಲಿ ಅತಿಯಾಗಿ ಅನುಭವಿಸುಂತಾಗಿದೆ.
ಅಂತೆಯೇ ಇಲ್ಲೊಬ್ಬ ಹುಡುಗ ಕೊರೊನಾ ಲಾಕ್ ಡೌನ್ ಟೈಮಲ್ಲಿ ತನ್ನ ಕನಸಿನ ಬಸ್ಸಿಗೆ ರೂಪು ಕೊಟ್ಟಿದ್ದಾನೆ. ಅಂದಹಾಗೆ ಇದು ಅಂತಿಂತ ಬಸ್ ಅಲ್ಲ. ತಾನು ಸ್ಕೂಲ್ ಹಾಗೂ ಇನ್ನಿತರೆಡೆಗೆ ಸಂಚರಿಸೋಕೆ ಅವಲಂಬಿಸೋ ಬಸ್ಸಿನ ಮಾದರಿಯನ್ನೇ ಮರುಸೃಷ್ಟಿಸಿದ್ದಾನೆ.
ಕಿನ್ನಿಗೋಳಿಯ ಶಿಮಂತೂರಿನ ಶ್ರೀಶಾರದಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ತೌಶೀದ್ ಎಂಬಾತನೇ ಈ ರೀತಿ ಲಾಕ್ಡೌನ್ ಟೈಮಲ್ಲಿ ಮಾದರಿ ಬಸ್ ವೊಂದಕ್ಕೆ ರೂಪು ಕೊಟ್ಟವನು. ತೌಶೀದ್ ತನ್ನಲ್ಲಿರುವ ಪ್ರತಿಭೆ ಮೂಲಕ ತಾನು ಪ್ರತಿದಿನ ನೋಡುತ್ತಿದ್ದ ಕಿನ್ನಿಗೋಳಿ–ಮಂಗಳೂರು ನಡುವೆ ಸಂಚರಿಸುವ ‘ಬಾದ್ ಶಾ‘ ಟ್ರಾವೆಲ್ಸ್ ಹೆಸರಿನ ಬಸ್ ಮಾದರಿಯನ್ನೇ ತನ್ನ ಆಟಿಕೆಯನ್ನಾಗಿಸಿದ್ದಾನೆ.
ತನ್ನ ಖುಷಿಗಾಗಿ ಮಾಡಿದ್ದ ಈ ಆಟಿಕೆ ಬಸ್ ಅದ್ಹೇಗೋ ಸ್ನೇಹಿತರ ಮೂಲಕ ಬಸ್ ಸಿಬ್ಬಂದಿ ಹಾಗೂ ಅದರ ಮಾಲಕರಿಗೂ ಗೊತ್ತಾಗಿದೆ. ಪ್ರಸ್ತುತ ವಿದೇಶದಲ್ಲಿ ಉದ್ಯೋಗದಲ್ಲಿರುವ 'ಬಾದ್ ಶಾ' ಟ್ರಾವೆಲ್ಸ್ ಮಾಲಕ ನೌಶಾದ್ ಅವರು ಕೂಡಾ ವೀಡಿಯೋ ಕರೆ ಮಾಡಿ ಈ ಆಟಿಕೆ ಬಸ್ ನ್ನ ವೀಕ್ಷಿಸಿದ್ದಾರೆ.
ಅಲ್ಲದೇ ತಮ್ಮದೇ ಬಸ್ ನ ಮಾದರಿಯನ್ನ ಕಂಡು ಅಚ್ಚರಿಗೊಂಡಿದ್ದಾರೆ. ಮಾದರಿ ಬಸ್ ನ ಆಕೃತಿಯನ್ನ ತನಗೆ ನೀಡುವಂತೆ ತೌಶೀದ್ ನನ್ನ ಕೇಳಿಕೊಂಡಿದ್ದಾರೆ. ಆದರೆ ತೌಶೀದ್ ಅದನ್ನ ಕೊಡೋದಕ್ಕೆ ಹಿಂದೆ ಮುಂದೆ ನೋಡುತ್ತಿದ್ದಂತೆ, ಬಸ್ ಮಾಲಕರು "ಹಾಗಿದ್ರೆ ಇಂತಹದ್ದೇ ಇನ್ನೊಂದು ಮಾದರಿ ಬಸ್ ನ್ನ ತನಗಾಗಿ ಮಾಡುವಂತೆ" ತಿಳಿಸಿದ್ದಾರೆ.
ತೌಶೀದ್, ಇದು ಮಾತ್ರವಲ್ಲದೇ ಹಲವು ಆಟಿಕೆ ವಸ್ತುಗಳನ್ನ ಮಾಡಿದ್ದು, ಅದೆಲ್ಲವೂ ನಾವು ಪ್ರತಿದಿನ ನೋಡುವಂತಹ ವಾಹನಗಳೇ ಆಗಿವೆ. ಅದ್ರಲ್ಲೂ 'ಬಾದ್ ಶಾ' ಟ್ರಾವೆಲ್ಸ್ ಮಾದರಿಯಂತೂ ಅದ್ಭುತವಾಗಿದ್ದು, ಅದರ ಪೈಂಟಿಂಗ್, ನೇಮ್ ಬೋರ್ಡ್, ಲೈಂಟಿಂಗ್ಸ್ ಅದೆಲ್ಲವನ್ನೂ ಒರಿಜಿನಲ್ 'ಬಾದ್ ಶಾ' ಟ್ರಾವೆಲ್ಸ್ ಮಾದರಿಯಲ್ಲೇ ತಯಾರಿಸಿದ್ದಾನೆ. ಇದಕ್ಕಾಗಿ ವಾರಗಳ ಕಾಲ ಶ್ರಮವಹಿಸಿ ತನ್ನ ಪಾಕೆಟ್ ಮನಿ ಬಳಸಿ ತಯಾರಿಸಿದ್ದಾನೆ.
ಒಟ್ಟಿನಲ್ಲಿ ಮಕ್ಕಳಲ್ಲಿ ಅಡಗಿರುವ ತೆರೆಮರೆಯ ಪ್ರತಿಭೆಗಳು ಕೊರೊನಾ ಲಾಕ್ಡೌನ್ ಸಮಯದಲ್ಲಿ ಹೊರಬರುವಂತಾಗಿದೆ. ಮಾತ್ರವಲ್ಲದೇ 'ಬಾದ್ ಶಾ' ಬಸ್ ಮಾಲಕರು ಈ ಪುಟ್ಟ ವಿದ್ಯಾರ್ಥಿಯ ಪ್ರತಿಭೆಗೆ ಮೆಚ್ಚುಗೆ ಸೂಚಿಸಿ ಪ್ರೋತ್ಸಾಹಿಸಿದ್ದು ಕೂಡಾ ಅಭಿನಂದನಾರ್ಹವೇ ಸರಿ.
Kshetra Samachara
10/12/2020 02:55 pm