ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಬೋಟ್ ನಾಪತ್ತೆಗೆ ಮೂರು ವರ್ಷ... ಪರಿಹಾರವೂ ಮರೀಚಿಕೆ

ವಿಶೇಷ ವರದಿ: ರಹೀಂ ಉಜಿರೆ

ಮಲ್ಪೆ: ಮೂರು ವರ್ಷಗಳ ಹಿಂದೆ ಅರಬ್ಬೀ ಸಮುದ್ರದಲ್ಲಿ ಸುವರ್ಣ ತ್ರಿಭುಜ ಎಂಬ ನತದೃಷ್ಟ ಬೋಟ್ ಮುಳುಗಿ ಏಳು ಮೀನುಗಾರರು ನಾಪತ್ತೆಯಾದ ಪ್ರಕರಣಕ್ಕೆ 3 ವರ್ಷಗಳೇ ಸಂದರೂ ನಿಗೂಢವಾಗಿಯೇ ಉಳಿದಿದೆ... ಹಾಗೇ ಪರಿಹಾರವೂ ಮರೀಚಿಕೆಯಾಗಿದೆ.

ಏಳು ಮಂದಿ ಮೀನುಗಾರರೊಂದಿಗೆ 2018 ರ ಡಿಸೆಂಬರ್ 13 ರಂದು ಹೊರಟ ತೊಟ್ಟಂನ ಚಂದ್ರಶೇಖರ ಕೋಟ್ಯಾನ್ ಗೆ ಸೇರಿದ ಸುವರ್ಣ ತ್ರಿಭುಜ ಬೋಟ್ 15ರಂದು ಆಳ ಸಮುದ್ರದಲ್ಲಿ ನಾಪತ್ತೆಯಾಗಿತ್ತು. ಮುಳುಗು ತಜ್ಞರ ಮೂಲಕ ಶೋಧ ನಡೆಸಿ ಮುಳುಗಡೆಯಾಗಿದ್ದು ಹೌದು ಎಂಬುದನ್ನು ಖಚಿತ ಪಡಿಸಿಕೊಳ್ಳಲಾಯಿತು. ಆದರೆ ಆ ಬೋಟ್‌ನ ಆಸುಪಾಸಿನಲ್ಲಿ ಒಬ್ಬ ವ್ಯಕ್ತಿಯ ಕುರುಹೂ ಪತ್ತೆಯಾಗಲೇ ಇರಲಿಲ್ಲ.

ಈ ದುರ್ಘಟನೆ ಬಳಿಕ ಮೀನುಗಾರರ ಕುಟುಂಬಗಳಿಗೆ ರಾಜ್ಯ ಸರಕಾರ ತಾತ್ಕಾಲಿಕ ಪರಿಹಾರ ಘೋಷಣೆ ಮಾಡಿತ್ತು.ಆದರೆ ಕೇಂದ್ರದ ಪರಿಹಾರ ಇವತ್ತು ಬರಬಹುದು ನಾಳೆ ಬರಬಹುದು ಎಂದು ನಿರೀಕ್ಷಿಸಿದ್ದೇ ಬಂತು...ಮೂರು ವರ್ಷ ಕಳೆದರೂ ಚಿಕ್ಕಾಸಿನ ಪರಿಹಾರವೂ ಕುಟುಂಬಕ್ಕೆ ಸಿಗಲಿಲ್ಲ.

ಈ ಬೋಟ್ ಹೇಗೆ ಮುಳುಗಡೆ ಆಯ್ತು ? ಮುಳುಗಡೆ ಆಗಿದ್ದರೆ ಮೀನುಗಾರರ ಶವ ಎಲ್ಲಿಗೆ ಹೋಯಿತು? ಉಹೂಂ ,ಅತಿ ಸಣ್ಣ ಕುರುಹೂ ಈತನಕ ಸಿಗಲೇ ಇಲ್ಲ.ಇತ್ತ ಕುಟುಂಬದವರು ತಮ್ಮ‌ ಮನೆಯವರಿಗಾಗಿ ಕಾದರು. ಕೊನೆಗೆ ಶವವಾದರೂ ಹುಡುಕಿ ಕೊಡಿ ಎಂದು ಗೋಗರೆದರು.ತಿಂಗಳು, ವರ್ಷ ಕಳೆದರೂ ಈಗ ಮೂರು ವರ್ಷಗಳ ಬಳಿಕವೂ ಬೋಟ್ ನಾಪತ್ತೆ ಪ್ರಕರಣ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ.

ಮತ್ತೊಂದು ಕಡೆ ಸುವರ್ಣ ತ್ರಿಭುಜ 1.10 ಕೋ.ರೂ. ಮೌಲ್ಯ ಹೊಂದಿದ್ದು, ವಿಮೆ ಮೂಲಕ 40 ಲ.ರೂ. ಮಾತ್ರ ಲಭಿಸಿದೆ. ಅತ್ತ ಬೋಟೂ ಇಲ್ಲ ,ಇತ್ತ ಮೀನುಗಾರರೂ ಇಲ್ಲ! ಒಟ್ಟಿನಲ್ಲಿ ಅರಬ್ಬೀ ಸಮುದ್ರದಲ್ಲಿ ನಡೆದ ಈ ದುರಂತ ಮಾತ್ರ ಮೀನುಗಾರ ಸಮುದಾಯಕ್ಕೆ ಬಹುದೊಡ್ಡ ವಿಸ್ಮಯ ಹಾಗೂ ಕಹಿ ನೆನಪಾಗಿಯೂ ಉಳಿದಿದೆ

Edited By : Nagesh Gaonkar
Kshetra Samachara

Kshetra Samachara

15/12/2021 06:22 pm

Cinque Terre

15.6 K

Cinque Terre

0