ವರದಿ: ದಾಮೋದರ ಮೊಗವೀರ, ನಾಯಕವಾಡಿ
ಬೈಂದೂರು: ವಿಜಯ ದಶಮಿ ದಿನವಾದ ನಿನ್ನೆ ಬೈಂದೂರು ತಾಲೂಕಿನ ನಾಡ ಗ್ರಾಪಂ ವ್ಯಾಪ್ತಿಯ ಪಡುಕೋಣೆ ಹೈಸ್ಕೂಲ್ ಎದುರುಗಡೆಯ ಕೊರಗ ಕಾಲೊನಿ ನಿವಾಸಿ ಸುನೀತಾ ಅವರ ಮನೆ ಬೆಂಕಿಗೆ ಸಂಪೂರ್ಣ ಆಹುತಿಯಾಗಿದೆ.
ಈ ಘಟನೆ ಬಗ್ಗೆ ಸುನೀತಾ ಅವರನ್ನು ಕೇಳಿದಾಗ, "ದಿನನಿತ್ಯದ ಕೆಲಸ ಮುಗಿಸಿ, ದೇವರಿಗೆ ದೀಪ ಹಚ್ಚಿ ಮಧ್ಯಾಹ್ನ ಹತ್ತಿರದ ಸಂಬಂಧಿ ಮನೆಗೆ ಹೋಗಿದ್ದೆ. ಮಧ್ಯಾಹ್ನ 12ರ ಹೊತ್ತಿಗೆ ನೆರೆಮನೆಯವರಿಂದ ನನ್ನ ಮನೆಗೆ ಬೆಂಕಿ ಹತ್ತಿಕೊಂಡಿರುವ ವಿಚಾರ ತಿಳಿಯಿತು ಎಂದರು. ಪೀಠೋಪಕರಣ, ಆಹಾರ ಸಾಮಗ್ರಿ, ಪಾತ್ರೆ, ಕಪಾಟು, ಬಟ್ಟೆಬರೆ, ಚಿನ್ನಾಭರಣ ಹಾಗೂ TVS ಬೈಕ್ ಸಂಪೂರ್ಣ ಬೆಂಕಿಗೆ ಆಹುತಿಯಾಗಿದ್ದು, ಮನೆ ಜೊತೆ ಸುಮಾರು 4 ಲಕ್ಷ ರೂ. ಮೌಲ್ಯದ ವಸ್ತುಗಳೂ ನಾಶವಾಗಿದೆ" ಎಂದು ಅಳಲು ತೋಡಿಕೊಂಡರು.
ಹೌದು, ಸುನೀತಾ ಮತ್ತು ಸ್ಥಳೀಯರು ಹೇಳುವಂತೆ ದೇವರಿಗೆ ಹಚ್ಚಿದ ದೀಪ ಅಲ್ಲೇ ಹತ್ತಿರದಲ್ಲಿ ಇರುವ ಬಟ್ಟೆ ಪರದೆಗೆ ಆಕಸ್ಮಿಕವಾಗಿ ತಗಲಿರುವುದರಿಂದ ಈ ಬೆಂಕಿ ಅನಾಹುತ ಸಂಭವಿಸಿದೆ ಎನ್ನಲಾಗಿದೆ. ಈ ಬಗ್ಗೆ ಗಂಗೊಳ್ಳಿ ಠಾಣೆಗೆ ಸುನೀತಾ ದೂರು ನೀಡಿದ್ದಾರೆ.
ಸ್ಥಳಕ್ಕೆ ಉಡುಪಿ ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮತ್ತು ಕುಂದಾಪುರ ಪುರಸಭೆ ಸದಸ್ಯ ಪ್ರಭಾಕರ್ ವಿ., ಗ್ರಾಮಲೆಕ್ಕಿಗರು, ಪಿಡಿಒ ಅವರು ಪೊಲೀಸರೊಂದಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸಂತ್ರಸ್ತ ಕುಟುಂಬಕ್ಕೆ ತುರ್ತಾಗಿ ಸರಕಾರದಿಂದ ಪರಿಹಾರ ದೊರಕಿಸಿ ಕೊಡಬೇಕೆಂದು ಬೈಂದೂರು ತಹಸೀಲ್ದಾರ್ ಶೋಭಾಲಕ್ಷ್ಮಿ ಅವರಿಗೆ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದೆ.
Kshetra Samachara
16/10/2021 11:00 pm