ಉಡುಪಿ: ಕರಾವಳಿ ಅಂದರೆ ವಿಶಿಷ್ಟ ಪ್ರತಿಭೆಗಳ ಸಾಗರ ಅಂತಾನೇ ಹೇಳಬಹುದು. ರಾಜ್ಯದಲ್ಲಿ ಕರಾವಳಿಯನ್ನು, ಅದರಲ್ಲೂ ಉಡುಪಿ ಜಿಲ್ಲೆಯವರನ್ನು ಬುದ್ಧಿವಂತರು ಎಂದೆ ಕರೆಯಲಾಗುತ್ತದೆ. ಇಲ್ಲಿ ಸಾಹಿತ್ಯ ಕ್ಷೇತ್ರದಿಂದ ಹಿಡಿದ, ಸಿನೆಮಾ, ವ್ಯವಹಾರಿಕ ಕ್ಷೇತ್ರ, ಮಾಧ್ಯಮ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲಿ ವಿಶಿಷ್ಟವಾಗಿ ಸಾಧನೆ ಮಾಡಿದ ಸಾಧಕರನ್ನು ಕಾಣಬಹುದು. ಈ ಸಾಧಕರ ಪಟ್ಟಿಗೆ ಹೊಸ ಸೇರ್ಪಡೆ ಈ ನವ ಯುವಕ.
ಈತ ಸೀದಾ ಸಾದ ಹುಡುಗ, ಆದರೆ ಆತನ ಕಣ್ಣಿನಲ್ಲಿ ಅಪಾಯಕಾರಿ ಕ್ರೀಡೆಯ ಕುರಿತು ಒಲವಿತ್ತು. ಕೆಲಸದ ಒತ್ತಡದ ನಡುವೆಯು ಯು ಟ್ಯೂಬ್ ಮೂಲಕ ಕ್ರೀಡೆಯ ಬಗ್ಗೆ ಮಾಹಿತಿ ಪಡೆದು, ಕೆಲವು ಪಟ್ಟುಗಳನ್ನು ಕಲಿತ ಈತ ಥೈಲ್ಯಾಂಡ್ ಗೆ ತೆರಳುತ್ತಾನೆ. ಅಲ್ಲಿ ಈ ಅಪಾಯಕಾರಿ ಕ್ರೀಡೆಯ ಚಾಂಪಿಯನ್ ನನ್ನು ಸೋಲಿಸಿ ಚಾಂಪಿಯನ್ ಆಗುತ್ತಾನೆ. ಇದನ್ನು ಕೇಳ್ತಾ ಇದ್ರೆ ಇದು ಯಾವುದೇ ಸಿನೇಮಾದ ಸ್ಟೋರಿ ಅನ್ನಿಸಬಹುದು ಆದರೆ ಇದು ನಿಜ. ಈ ಸಾಧನೆ ಮಾಡಿದ ಸಾಧಕ ಮತ್ಯಾರು ಅಲ್ಲ ಕುಂದಾಪುರದ ಕಟ್ಕೇರೆಯ ನಿವಾಸಿ ಅನೀಶ್ ಶೆಟ್ಟಿ. ಕಟ್ಕೇರೆಯ ದಿ.ಶಂಕರ್ ಶೆಟ್ಟಿ ಹಾಗೂ ಉಷಾ ಶೆಟ್ಟಿ ದಂಪತಿಯ ಪುತ್ರನಾಗಿರುವ ಅನೀಶ್, ಆಳ್ವಾಸ್ ಶಿಕ್ಷಣ ಸಂಸ್ಥೆಯ ಹಳೆ ವಿದ್ಯಾರ್ಥಿ. ಸದ್ಯ ಸಾಫ್ಟ್ವೇರ್ ಇಂಜಿನಿಯರ್ ಪದವೀಧರನಾಗಿರುವ ಅನೀಶ್ ಶೆಟ್ಟಿ, ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿ ಕೂಡ ಹೌದು. ಈತ ಗೆದ್ದದ್ದು ಪ್ರಪಂಚದಲ್ಲಿಯೇ ಅತ್ಯಂತ ಅಪಾಯಕಾರಿ ಕ್ರೀಡೆ ಎಂದು ಕರೆಸಿಕೊಂಡಿರುವ ಕಿಕ್ ಬಾಕ್ಸಿಂಗ್ ನಲ್ಲಿ. ಥಾಯ್ಲಂಡ್ನಲ್ಲಿ ಜರಗಿದ ಅಂತಾರಾಷ್ಟ್ರೀಯ ಮಟ್ಟದ ಮೂವಾಯ್ ಥಾಯ್ ಕಿಕ್ ಬಾಕ್ಸಿಂಗ್ ಚಾಂಪಿಯನ್‌ಶಿಪ್ ನ ೬೫ ಕೆ.ಜಿ. ವಿಭಾಗದಲ್ಲಿ ನಾಲ್ಕು ಬಾರಿ ಚಾಂಪಿಯನ್ ಥಾಯ್ಲೆಂಡ್ನ ನ್ಯುವ್ಲಿಕಿಟ್ ಅವರನ್ನು ಏಕೈಕ ಸುತ್ತಿನಲ್ಲಿ ಹೊಡೆದುರುಳಿಸಿ ಚಾಂಪಿಯನ್ ಪಟ್ಟವನ್ನು ಅನೀಶ್ ಶೆಟ್ಟಿ ಕಟ್ಕೇರೆ ಅಲಂಕರಿಸಿದ್ದಾರೆ.
ಬಾಕ್ಸಿಂಗ್ ರಿಂಕ್ನಲ್ಲಿ ಎದುರಾಳಿ ಸೋಲಿಸಿ ಅಂತರ ರಾಷ್ಟ್ರ ಮಟ್ಟದ ಚಾಂಪಿಯನ್ ಷಿಪ್ ಪಟ್ಟ ದಾಖಲಿಸಿದ ಅನೀಶ್ ಶೆಟ್ಟಿ ಸದ್ಯ ಗಮನ ಸೆಳೆದಿದ್ದಾರೆ. ಮನೆಯವರ ತೀವ್ರ ವಿರೋಧದ ನಡುವೆಯೂ ಬಾಕ್ಸಿಂಗ್ ಅಭ್ಯಾಸ ಮಾಡಿದ್ದ ಅವಿನಾಶ್ ಶೆಟ್ಟಿ ಇದೀಗ ತನ್ನ ಸಾಧನೆ ಮೂಲಕ ಕುಟುಂಬಸ್ಥರು ಹೆಮ್ಮೆ ಪಡುವಂತೆ ಮಾಡಿದ್ದಾರೆ. ಹುಟ್ಟೂರಿಗೆ, ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ. ಎದುರಾಳಿಗೆ ‘ಫ್ಲೈಯಿಂಗ್ ನೀ’ (ಹಾರು ಮುಂಗಾಲು) ನೀಡುವ ಮೂಲಕ ಜಯ ದಾಖಲಿಸಿದ್ದು ಮತ್ತೊಂದು ವಿಶೇಷ ಎನ್ನಬಹುದು.
ಬೆಂಗಳೂರಿನಲ್ಲಿ ಖಾಸಗಿ ಸಾಫ್ಟ್ವೇರ್ ಕಂಪನಿಯಲ್ಲಿ ಎಂಜಿನಿಯರ್ ಆಗಿದ್ದಾರೆ. ಕಾಲೇಜು ದಿನಗಳಲ್ಲಿ ಉತ್ತಮ ವಾಲಿಬಾಲ್ ಆಟಗಾರರಾಗಿದ್ದರು. ಫಿಟ್ನೆಸ್ಗಾಗಿ ಜಿಮ್ ಸೇರಿಕೊಂಡಿದ್ದರು. ಅವರಿಗೆ ಗೋವಿಂದ ಸಿಂಗ್ ಎಂಬುವವರು ’ಮುಯಿಥಾಯ್’ ಕ್ರೀಡೆ ಬಗ್ಗೆ ಪರಿಚಯ ಮಾಡಿಕೊಟ್ಟಿದ್ದರು. ಬಾಕ್ಸಿಂಗ್ನಲ್ಲಿ ಅಪಾರ ಆಸಕ್ತಿ ಹೊಂದಿದ್ದ ಅನೀಶ್, ಮನೆಯರಿಗೆ ಗೊತ್ತಾಗದಂತೆ ೨ ವರ್ಷಗಳಿಂದ ತರಬೇತಿ ಪಡೆಯುತ್ತಿದ್ದರು. ೧ ತಿಂಗಳಿನಿಂದ ಥಾಯ್ಲೆಂಡ್ ತರಬೇತುದಾರ ಸಿಡ್ ಅವರಿಂದ ತರಬೇತಿ ಪಡೆದು ಸ್ಪರ್ಧೆಗೆ ತಯಾರಿ ನಡೆಸುತ್ತಿದ್ದರು. ಬಾಕ್ಸರ್ ನ್ಯುವ್ಲಿಕಿಟ್ ಅವರು ಈಗಾಗಲೇ ೬ ಫೈಟ್ಗಳನ್ನು ಮಾಡಿ ಸೈ ಎನಿಸಿಕೊಂಡಿದ್ದರು.
ಆದರೆ ಮೊದಲ ಬಾರಿ ಸ್ಪರ್ಧೆ ಮಾಡಿದ್ದ ಅನೀಶ್ ಅವರು ಬಾಕ್ಸರ್ ನ್ಯುವ್ಲಿಕಿಟ್ ವಿರುದ್ಧ ಒಂದೇ ಸುತ್ತಿನಲ್ಲಿ ಗೆಲುವು ದಾಖಲಿಸಿ ದಾಖಲೆ ಬರೆದಿದ್ದಾರೆ.
ಸಂದೇಶ್ ಶೆಟ್ಟಿ ಆಜ್ರಿ ಪಬ್ಲಿಕ್ ನೆಕ್ಸ್ಟ್ ಉಡುಪಿ.
Kshetra Samachara
04/11/2020 07:15 pm