ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಬಾಳಿಗಾ ಆಸ್ಪತ್ರೆಯಲ್ಲಿ ಸ್ವಲೀನತೆ ಹಾಗೂ ಇತರ ವೈಕಲ್ಯತೆಗಳ ಕುರಿತು ಕಾರ್ಯಾಗಾರ

ಉಡುಪಿ: ದೈಹಿಕ ವಿಕಲತೆಯ ಜೊತೆಗೆ ಮಾನಸಿಕ ಆರೋಗ್ಯದ ಬಗ್ಗೆಯೂ ಹೆಚ್ಚು ಗಮನ ಕೊಡಬೇಕಾಗಿದೆ. ಆಟಿಸಂ ಹಾಗೂ ಮಾನಸಿಕ ಕಾಯಿಲೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಇಂದಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಗ್ರಾಮೀಣ ಪ್ರದೇಶದಲ್ಲಿ ಸೇತುವೆಯಾಗಿ ಕೆಲಸ ಮಾಡಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಹೇಳಿದ್ದಾರೆ.

ಉಡುಪಿ ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ದೊಡ್ಡಣಗುಡ್ಡೆ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ, ಕಮಲಾ ಬಾಳಿಗಾ ಚಾರಿ ಟೇಬಲ್ ಟ್ರಸ್ಟ್, ಬೆಂಗಳೂರು ಡಿಸೆಬಿಲಿಟಿ ಎನ್‌ಜಿಓ ಅಲಯನ್ಸ್(ಡಿಎನ್‌ಎ) ಹಾಗೂ ಉಡುಪಿ ಆಟಿಸಂ ಸೊಸೈಟಿಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲೆಯ ಗ್ರಾಮೀಣ ಪುನರ್ವಸತಿ ಹಾಗೂ ತಾಲೂಕು ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರಿಗೆ ಎ.ವಿ.ಬಾಳಿಗಾ ಆಸ್ಪತ್ರೆಯಲ್ಲಿ ಆಯೋಜಿಸಲಾದ ಸ್ವಲೀನತೆ ಹಾಗೂ ಇತರ ವೈಕಲ್ಯತೆಗಳ ಕುರಿತ ಎರಡು ದಿನಗಳ ಜಾಗೃತಿ ಕಾರ್ಯಾಗಾರ `ಸಿಂಚನ' ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಕಾರ್ಯಕರ್ತರಿಗೆ ಈ ಸಂಬಂಧ ಕಾನೂನು, ರೋಗಗಳ ಕುರಿತು ಜ್ಞಾನ ನೀಡಿದರೆ, ವಿಕಲಚೇತನರು, ಆಟಿಸಂ ಪೀಡಿತರನ್ನು ಆಸ್ಪತ್ರೆ ಹಾಗೂ ಸರಕಾರದ ಯೋಜನೆಗೆ ಲಿಂಕ್ ಮಾಡಲು ಅನುಕೂಲವಾಗುತ್ತದೆ. ಅಲ್ಲದೆ ಈ ಮಾಹಿತಿಗಳು ಕಾರ್ಯಕರ್ತರ ಮೂಲಕ ಗ್ರಾಮೀಣ ಪ್ರದೇಶದ ಜನರಿಗೆ ತಲುಪಬೇಕು. ವಿಕಲಚೇತನರಾಗಿದ್ದರೂ ಪ್ರತಿಯೊಬ್ಬ ಮನುಷ್ಯರಲ್ಲಿ ಅವರದ್ದೆ ಆದ ಶಕ್ತಿ ಸಾಮರ್ಥ್ಯ ಇರುತ್ತದೆ. ಅದನ್ನು ಗುರುತಿಸುವ ಕಾರ್ಯ ಅತೀ ಮುಖ್ಯವಾಗಿ ಆಗಬೇಕು. ಈ ವಿಚಾರದಲ್ಲಿ ಕಾರ್ಯಕರ್ತರಿಗೆ ಸೂಕ್ಷ್ಮತೆ ಇರಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಉಡುಪಿ ಆಟಿಸಂ ಸೂಸೈಟಿಯ ಅಧ್ಯಕ್ಷ ಹಾಗೂ ಹಿರಿಯ ಮನೋವೈದ್ಯ ಡಾ.ಪಿ.ವಿ.ಭಂಡಾರಿ ಮಾತನಾಡಿ, ಮಾನಸಿಕ ಕಾಯಿಲೆಗಳು ಕೂಡ ಅಂಗವೈಕಲ್ಯತೆ ಎಂಬುದಾಗಿ ಸರಕಾರ ಘೋಷಣೆ ಮಾಡಿದೆ. ಅಂಗ ವೈಕಲ್ಯತೆಯನ್ನು ಅತೀ ಬೇಗ ಪತ್ತೆ ಹಚ್ಚಿ, ಸೂಕ್ತ ಚಿಕಿತ್ಸೆ ನೀಡಬೇಕಾಗಿದೆ. ಇಲ್ಲಿ ಚಿಕಿತ್ಸೆ ಅಂದರೆ ಮಾತ್ರೆ, ಔಷಧಗಳಲ್ಲ.

ವಿವಿಧ ರೀತಿಯ ಥೆರಫಿಗಳು ಅತೀ ಮುಖ್ಯ. ಆದುದರಿಂದ ಇದರಲ್ಲಿ ವೈದ್ಯರಿಗಿಂತ ಥೆರಫಿಸ್ಟ್ ಗಳ ಪಾತ್ರ ಹೆಚ್ಚು ಎಂದು ತಿಳಿಸಿದರು. ಈ ನಿಟ್ಟಿನಲ್ಲಿ ಈಗಾಗಲೇ ಆಶಾ ಕಾರ್ಯಕರ್ತರಿಗೆ ಮಾಹಿತಿ ನೀಡಲಾಗಿದೆ. ಮುಂದೆ ಅಂಗನವಾಡಿ ಕಾರ್ಯಕರ್ತರಿಗೂ ಮಾಹಿತಿ ನೀಡಲಾಗುವುದು. ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ರತ್ನ, ಡಿಎನ್‌ಎ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕುಮಾರಸ್ವಾಮಿ, ಕರಾವಳಿ ಅಧ್ಯಕ್ಷೆ ಪೂರ್ಣಿಮಾ ಭಟ್ ಮಾತನಾಡಿದರು. ಮಾನೋರೋಗ ತಜ್ಞ ಡಾ.ತಿಪ್ಪೆಸ್ವಾಮಿ ಉಪಸ್ಥಿತರಿದ್ದರು.

ಆಟಿಸಂ ಸೊಸೈಟಿಯ ಸಂಯೋಜಕ ಕೀರ್ತೆಶ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಸ್ಪತ್ರೆಯ ಆಡಳಿತಾಧಿಕಾರಿ ಸೌಜನ್ಯ ಶೆಟ್ಟಿ ವಂದಿಸಿದರು. ಸಮಾಲೋಚಕಿಯರಾದ ದೀಪಾಶ್ರೀ ಹಾಗೂ ಸುಚಿತ್ರಾ ಕಾರ್ಯಕ್ರಮ ನಿರೂಪಿಸಿದರು.

Edited By : PublicNext Desk
Kshetra Samachara

Kshetra Samachara

19/09/2022 06:15 pm

Cinque Terre

2.67 K

Cinque Terre

0

ಸಂಬಂಧಿತ ಸುದ್ದಿ