ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಡೆಬಿಡದೇ ಮಳೆ ಬರುತ್ತೆ, ಒಮ್ಮೊಲೆ ಬಿಸಿಲು ಬರುತ್ತೆ. ಪರಿಣಾಮ ಡೆಂಘಿ, ಮಲೇರಿಯಾ ಸಾಂಕ್ರಾಮಿಕ ರೋಗ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ಡೆಂಘಿ ಪ್ರಕರಣವು ಪತ್ತೆಯಾಗುತ್ತಿರುವುದರಿಂದ ಜನತೆಯಲ್ಲಿ ಆತಂಕ ಸೃಷ್ಟಿಯಾಗಿದೆ. ಕೊರೊನಾ ಸೋಂಕು ಕಾಣುವುದಕ್ಕಿಂತ ಮೊದಲು ದಕ್ಷಿಣ ಕನ್ನಡ ಜಿಲ್ಲೆಯ ಜನತೆ ಡೆಂಘಿ ಪ್ರಕರಣದಿಂದ ತತ್ತರಿಸಿ ಹೋಗಿದ್ದರು.
2020 ರಲ್ಲಿ ಹಾಗೂ 2021ರಲ್ಲಿ ಇಳಿಮುಖವಾಗಿದ್ದ ಡೆಂಘಿ ಪ್ರಕರಣಗಳು ಈ ಬಾರಿ ಮತ್ತೆ ಏರಿಕೆಯಾಗಿರೋದು ಜನರಲ್ಲಿ ಭೀತಿಯನ್ನು ಉಂಟುಮಾಡಿದೆ. ಇದೀಗ ಮತ್ತೆ ಜಿಲ್ಲೆಯಲ್ಲಿ ದಿನ ಬಿಟ್ಟು ದಿನ ಮಳೆಯಾಗುತ್ತಿದ್ದು, ಡೆಂಘಿ ಹಾಗೂ ಮಲೇರಿಯಾ ಪ್ರಕರಣಗಳಲ್ಲೂ ಏರಿಕೆ ಕಂಡು ಬರುತ್ತಿದೆ. ಮಾನ್ಸೂನ್ ಪ್ರವೇಶಕ್ಕಿಂತ ಮೊದಲೇ ಜಿಲ್ಲೆಯಲ್ಲಿ ಈಗಾಗಲೇ 55 ಡೆಂಘಿ ಹಾಗೂ 51 ಮಲೇರಿಯಾ ಪ್ರಕರಣಗಳು ದಾಖಲಾಗಿದೆ.
ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆಯ ಪರಿಣಾಮ ಅಲ್ಲಲ್ಲಿ ನೀರು ನಿಲ್ಲುತ್ತಿದ್ದು, ಅದರಲ್ಲಿ ಉತ್ಪತ್ತಿಯಾಗುವ ಲಾರ್ವದಿಂದ ಡೆಂಘಿ, ಮಲೇರಿಯಾ ಹರಡುವ ಸೊಳ್ಳೆಗಳು ಸೃಷ್ಟಿಯಾಗುತ್ತದೆ. ಈ ಸೊಳ್ಳೆಗಳಿಂದ ಮಲೇರಿಯಾ, ಡೆಂಘಿ ಸೋಂಕು ತಗುಲುತ್ತದೆ. ಅಲ್ಲದೆ ಡೆಂಘಿ ವ್ಯಕ್ತಿಯಿಂದ ವ್ಯಕ್ತಿಗೆ ಹರಡುವಂತೆ ಮಾಡುತ್ತದೆ.
2019ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲಿಯೇ 850ಕ್ಕೂ ಅಧಿಕ ಮಂದಿ ಡೆಂಗ್ಯು ಪೀಡಿತರಾಗಿದ್ದರು. ಇವರಲ್ಲಿ 13 ಮಂದಿ ಡೆಂಘಿ ಸೋಂಕಿಗೆ ಬಲಿಯಾಗಿದ್ದರು. ಸದ್ಯ ಈ ಡೆಂಘಿ, ಮಲೇರಿಯಾ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ಮನಪಾ ವ್ಯಾಪ್ತಿಯಲ್ಲಿರುವ ಸರ್ಕಾರಿ ಕಚೇರಿಗಳ ಸುತ್ತಮುತ್ತ ಸ್ವಚ್ಛತೆ, ಲಾರ್ವ ತೆರವು ಕಾರ್ಯಚರಣೆ ನಡೆಸಲಾಗಿದೆ.
ಒಟ್ನಲ್ಲಿ ರೋಗವನ್ನು ತಡೆಯಲು ಮನೆ, ವಸತಿ ಸಮುಚ್ಛಯಗಳ ಸುತ್ತ ನೀರು ನಿಲ್ಲದಂತೆ ಜಾಗ್ರತೆ ವಹಿಸಿದ್ದಲ್ಲಿ ಡೆಂಘಿ ಮಲೇರಿಯಾ ನಿಯಂತ್ರಣ ಸಾಧ್ಯ.
Kshetra Samachara
02/06/2022 06:34 pm