ಉಡುಪಿ: ಇಡೀ ದೇಶಕ್ಕೆ ಕೊರೊನಾ ಲಾಕ್ ಡೌನ್ ಹೇರಿದಾಗ ಎಲ್ಲರೂ ಮನೆಯಲ್ಲಿ ಉಳಿದರೆ, ವೈದ್ಯಕೀಯ ಕ್ಷೇತ್ರ ಮತ್ತು ಪೊಲೀಸ್ ಇಲಾಖೆ ೨೪/೭ ಕರ್ತವ್ಯ ನಿರ್ವಹಿಸಿತ್ತು. ಆದರೆ ಈಗ ಕೊರೊನಾ ವಾರಿಯರ್ಸ್ ಎಂದು ಕರೆಸಿಕೊಳ್ಳುವ ಪೊಲೀಸರು ಸಂಕಷ್ಟದ ದಿನ ಎದುರಿಸುತ್ತಿದ್ದಾರೆ!
ಕಳೆದ ಹಲವು ವರ್ಷಗಳ ಹಿಂದೆ ಪೊಲೀಸ್ ಸಿಬ್ಬಂದಿ ಪ್ರಯೋಜನಕ್ಕೆ ಸರಕಾರ ಆರೋಗ್ಯ ಭಾಗ್ಯ ಯೋಜನೆ ತಂದಿತ್ತು. ಆದರೆ, ಈಗ ಸರಕಾರ ಆಸ್ಪತ್ರೆಗಳಿಗೆ ಭರಿಸಬೇಕಾದ ಕೋಟ್ಯಂತರ ಹಣ ನೀಡದೆ ಪೊಲೀಸ್ ಸಿಬ್ಬಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಆರೋಗ್ಯ ಭಾಗ್ಯ ಯೋಜನೆಯಲ್ಲಿ ಚಿಕಿತ್ಸೆ ಸಿಗುತ್ತದೆಂದು ಪೊಲೀಸರು ಆಸ್ಪತ್ರೆಗೆ ದಾಖಲಾದ್ರೆ ಚಿಕಿತ್ಸೆ ವೆಚ್ಚ ಅವರೇ ಭರಿಸಬೇಕಾದ ಪರಿಸ್ಥಿತಿ ಬಂದಿದೆ. ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ ತಾತ್ಕಾಲಿಕವಾಗಿ ಮುಂದಿನ ಆದೇಶದವರೆಗೆ ಪೊಲೀಸರ ಚಿಕಿತ್ಸೆಗಾಗಿ ಲಭ್ಯವಿರುವ ಆರೋಗ್ಯ ಭಾಗ್ಯ ಯೋಜನೆ ಸ್ಥಗಿತ ಮಾಡಿರುವುದಾಗಿ ಆದೇಶಿಸಿದೆ. ಈ ಆದೇಶವನ್ನು ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಅಧೀಕ್ಷಕರು ಹೊರಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲಾ ಆಸ್ಪತ್ರೆಗಳು ಇದೇ ರೀತಿ ಆದೇಶ ಹೊರಡಿಸಿದ್ರೂ ಆಶ್ಚರ್ಯವಿಲ್ಲ.ಯಾವುದೇ ರೀತಿಯ ಸೌಲಭ್ಯ ಈಗ ಪೊಲೀಸರಿಗೆ ಸಿಗುತ್ತಿಲ್ಲ.
ಆರೋಗ್ಯ ಭಾಗ್ಯ ಯೋಜನೆಯನ್ನೇ ನಂಬಿರುವ ಪೊಲೀಸರ ಕುಟುಂಬಗಳಿಗೆ ಈ ಯೋಜನೆ ಲಾಭ ಸಿಗದೇ ಹೋದರೆ ಸಂಕಷ್ಟಕ್ಕೆ ಸಿಲುಕಬೇಕಾದ ಪರಿಸ್ಥಿತಿ ಬರುತ್ತದೆಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಹೀಗಾಗಿ ಆರೋಗ್ಯ ಭಾಗ್ಯ ಯೋಜನೆಯನ್ನು ಎಲ್ಲಾ ಆಸ್ಪತ್ರೆಗಳಲ್ಲಿ ಒದಗಿಸಬೇಕು ಎಂದು ಪೊಲೀಸ್ ಸಿಬ್ಬಂದಿ ಒತ್ತಾಯಿಸಿದ್ದಾರೆ. ರಾಜ್ಯ ಸರ್ಕಾರ ಆದೇಶ ಹಿಂಪಡೆಯುವಂತೆ ಆಸ್ಪತ್ರೆಗಳಿಗೆ ಸೂಚನೆ ನೀಡಬೇಕು ಎಂಬ ಮಾತು ನಾಗರಿಕ ವಲಯದಿಂದಲೂ ಕೇಳಿ ಬರುತ್ತಿದೆ.
Kshetra Samachara
27/09/2020 07:41 pm