ಉಡುಪಿ: ರಾಜ್ಯದಲ್ಲಿ ಕಳೆದ 10 ವರ್ಷಗಳಲ್ಲಿ ಅರಣ್ಯ ವಿಸ್ತೀರ್ಣ ಪ್ರಮಾಣ ಹೆಚ್ಚಳವಾಗಿದ್ದು, ಅರಣ್ಯ ಇಲಾಖೆಯ ಎಲ್ಲಾ ಅಧಿಕಾರಿಗಳು, ಪ್ರಮುಖವಾಗಿ ಅರಣ್ಯ ರಕ್ಷಕರು ಮತ್ತು ವೀಕ್ಷಕರ ದಕ್ಷ ಕಾರ್ಯನಿರ್ವಹಣೆಯಿಂದ ಇದು ಸಾಧ್ಯವಾಗಿದೆ ಎಂದು ಕುಂದಾಪುರ ವಿಭಾಗದ ಡಿಎಫ್ ಓ ಆಶೀಶ್ ರೆಡ್ಡಿ ಹೇಳಿದರು.
ಅವರು ಉಡುಪಿಯ ಐ.ಎಂ.ಎ ಭವನದಲ್ಲಿ, ಕರ್ನಾಟಕ ರಾಜ್ಯ ಉಪ ವಲಯ ಅರಣ್ಯಾಧಿಕಾರಿ ಸಂಘ (ರಿ), ಅರಣ್ಯ ರಕ್ಷಕರ ಮತ್ತು ವೀಕ್ಷಕರ ಸಂಘ (ರಿ) ಉಡುಪಿ ಜಿಲ್ಲೆ ಇವರ ಜಂಟಿ ಆಶ್ರಯದಲ್ಲಿ ಜಿಲ್ಲಾ ಸರಕಾರಿ ಆಸ್ಪತ್ರೆ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ನಡೆದ ಅರಣ್ಯ ಹುತಾತ್ಮರ ಸ್ಮರಣಾರ್ಥ ನಡೆದ 22 ನೇ ವರ್ಷದ ರಕ್ತದಾನ ಶಿಬಿರದಲ್ಲಿ ಸ್ವಯಂ ರಕ್ತದಾನ ಮಾಡಿ, ಶಿಬಿರ ಉದ್ಘಾಟಿಸಿ ಮಾತನಾಡಿದರು.
ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಕೃಷ್ಣಶೆಟ್ಟಿ ಮಾತನಾಡಿ, ಅರಣ್ಯ ಇಲಾಖೆ ಸಿಬ್ಬಂದಿಗಳು ಅರಣ್ಯ ರಕ್ಷಣೆಯ ಜೊತೆಯಲ್ಲಿ ರಕ್ತದಾನದ ಮೂಲಕ ಸಾರ್ವಜನಿಕರ ರಕ್ಷಣೆ ಮಾಡುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದರು.
ಕರ್ನಾಟಕ ರಾಜ್ಯ ಅರಣ್ಯ ರಕ್ಷಕರ ಮತ್ತು ವೀಕ್ಷಕರ ಸಂಘ (ರಿ) ದ ಜಿಲ್ಲಾ ಅಧ್ಯಕ್ಷ ಕೇಶವ ಪೂಜಾರಿ ಪ್ರಾಸ್ತಾವಿಸಿದರು.
ಕರ್ನಾಟಕ ರಾಜ್ಯ ಉಪ ವಲಯ ಅರಣ್ಯಾಧಿಕಾರಿ ಸಂಘ (ರಿ) ಜಿಲ್ಲಾ ಅಧ್ಯಕ್ಷ ನಾಗೇಶ್ ಬಿಲ್ಲವ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ನಾಗಭೂಷಣ ಉಡುಪ, ಐ. ಎಂ.ಎ ಅಧ್ಯಕ್ಷ ಡಾ. ವಿನಾಯಕ ಶೆಣೈ, ಮಂಗಳೂರು ಅರಣ್ಯ ಜಾಗೃತ ದಳದ ಅಧಿಕಾರಿ ಶ್ರೀಧರ್, ಸರಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ದಿನಕರ ಶೆಟ್ಟಿ ಅಂಪಾರು, ನಿಕಟಪೂರ್ವ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್, ಉಡುಪಿ ವಲಯ ಅರಣ್ಯಾಧಿಕಾರಿ ಸುಬ್ರಹ್ಮಣ್ಯ ಆಚಾರ್, ರಾಜ್ಯ ಉಪ ವಲಯ ಅರಣ್ಯಾಧಿಕಾರಿಗಳ ಸಂಘದ ಗೌರವಾಧ್ಯಕ್ಷ ಪ್ರಕಾಶ್ಚಂದ್ರ, ರಾಜ್ಯ ಅರಣ್ಯ ರಕ್ಷಕರ ಮತ್ತು ವೀಕ್ಷಕರ ಸಂಘದ ಗೌರವಾಧ್ಯಕ್ಷ ದೇವರಾಜ ಪಾಣ ಹೆಚ್, ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ವೀಣಾ ಕುಮಾರಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹುತಾತ್ಮ ಅರಣ್ಯ ಸಿಬ್ಬಂದಿಗೆ ಗೌರವ ಸಲ್ಲಿಕೆ ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳಿಂದ ರಕ್ತದಾನ ನಡೆಯಿತು. ಸಂಘದ ಪ್ರದಾನ ಕಾರ್ಯದರ್ಶಿ ವೀರಣ್ಣ ಮಾಯಾಚಾರಿ ಸ್ವಾಗತಿಸಿದರು. ಉಪಾಧ್ಯಕ್ಷ ಕರುಣಾಕರ ಜೆ ಆಚಾರ್ಯ ವಂದಿಸಿದರು.
Kshetra Samachara
13/09/2022 11:01 am