ಉಡುಪಿ: ಕೊರೋನಾ ನಿಯಂತ್ರಣದ ಹೆಸರಲ್ಲಿ ಉಡುಪಿಯಲ್ಲಿ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಜಾರಿ ಮಾಡಲಾಗಿದೆ.ಆದರೆ ಕೇವಲ 1.27 ಪಾಸಿಟಿವಿಟಿ ರೇಟಿಂಗ್ ಇರುವ ಜಿಲ್ಲೆಗೆ ಯಾಕೆ ಈ ರೀತಿಯ ನಿಯಮ ಎಂದು ಆಡಳಿತ ಪಕ್ಷದ ಶಾಸಕರೇ ಗರಂ ಆಗಿದ್ದರೆ, ಸಾರ್ವಜನಿಕರು ಕೂಡ ಕರ್ಫ್ಯೂ ಅಗತ್ಯ ಇಲ್ಲ ಎಂದು ಜಿಲ್ಲಾಡಳಿತದ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಕೇರಳ, ಮಹಾರಾಷ್ಟ್ರ ಸಂಪರ್ಕ ಇರುವ ಜಿಲ್ಲೆ ಮತ್ತು ವೀಕೆಂಡ್ ಗಳಲ್ಲಿ ಪ್ರವಾಸಿಗರು ಹೆಚ್ಚಾಗಿ ಬರುವ ಕಾರಣ ಹಾಗೂ ರಾಜ್ಯಕ್ಕೆ ಹೋಲಿಸಿದಾಗ ಸರಾಸರಿ ರೇಟಿಂಗ್ ಹೆಚ್ಚಾಗಿದೆ ಎಂಬ ಕಾರಣ ಕೊಟ್ಟು ಉಡುಪಿ ಜಿಲ್ಲೆಯಲ್ಲೂ ಇಂದಿನಿಂದ ವೀಕೆಂಡ್ ಕರ್ಫ್ಯೂ ಹೇರಲಾಗಿದೆ. ರಾಜಕೀಯ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಿರ್ಬಂಧ ವಿಧಿಸಲಾಗಿದೆ. ಮದುವೆ ಇನ್ನಿತರ ಶುಭ ಕಾರ್ಯಗಳಿಗೆ 400 ಜನರಿಗೆ ಮಾತ್ರ ಭಾಗವಹಿಸಲು ಅವಕಾಶ ಇದೆ. ಧಾರ್ಮಿಕ ಕ್ಷೇತ್ರದಲ್ಲಿ ಉತ್ಸವ, ಮೆರವಣಿಗೆಗಳಿಗೆ ಅವಕಾಶ ಇಲ್ಲ ಅಂತ ಜಿಲ್ಲಾಧಿಕಾರಿ ಕೂರ್ಮಾ ರಾವ್ ಆದೇಶ ಹೊರಡಿಸಿದ್ದಾರೆ.ಈ ಮೊದಲು ಶಾಸಕರೇ ವೀಕೆಂಡ್ ಕರ್ಪ್ಯೂಗೆ ಆಕ್ಷೇಪ ವ್ತಕ್ತಪಡಿಸಿದ್ದರು.ಈಗ ಜನರೂ ಅಸಮಾಧಾನಗೊಂಡಿದ್ದಾರೆ.
ವೀಕೆಂಡ್ ಕರ್ಪ್ಯೂ ಇರುವ ಜಿಲ್ಲೆಗಳ ಪಟ್ಟಿಯಿಂದ ಉಡುಪಿ ಜಿಲ್ಲೆಯನ್ನು ಹೊರಗಿಡಬೇಕು ಎಂದು ಉಡುಪಿ ಶಾಸಕ ರಘುಪತಿ ಭಟ್ ಎರಡು ದಿನಗಳ ಹಿಂದೆಯೇ ಆಗ್ರಹಿಸಿದ್ದರು. ಈಗ ಸ್ವಲ್ಪ ವ್ಯವಹಾರ ವ್ಯಾಪಾರಗಳು ಚೇತರಿಸಿಕೊಳ್ಳುತ್ತಿವೆ. ಇಂತಹ ಸಂದರ್ಭದಲ್ಲಿ ಮತ್ತೆ ಕರ್ಫ್ಯೂ ಜಾರಿ ಮಾಡಿದರೆ ಸಮಸ್ಯೆ ಉಂಟಾಗಲಿದೆ.ಉಡುಪಿ ಜಿಲ್ಲೆ ಗಡಿ ಜಿಲ್ಲೆ ಅಲ್ಲ. ದಕ್ಷಿಣ ಕನ್ನಡ ಜಿಲ್ಲೆ ಗಡಿ ಜಿಲ್ಲೆ. ಹಾಗಾಗಿ ಉಡುಪಿಯಲ್ಲಿ ವೀಕೆಂಡ್ ಕರ್ಪ್ಯೂ ಬೇಡ ಎಂದು ಹೇಳಿದ್ದರು. ಅಲ್ಲದೇ ಸಾರ್ವಜನಿಕರು ಕೂಡ ನಮ್ಮ ಜಿಲ್ಲೆಯಲ್ಲಿ ಕೊರೋನಾ ಕಂಟ್ರೋಲ್ ಇದೆ, ವ್ಯಾಕ್ಸಿನೇಷನ್ ಕೂಡ ಒಳ್ಳೆಯ ರೀತಿಯಲ್ಲಿ ನಡೆಯುತ್ತಿದೆ ಹೀಗಾಗಿ ಯಾಕೆ ಕರ್ಫ್ಯೂ ಅಂತ ಪ್ರಶ್ನಿಸಿದ್ದಾರೆ.
ಒಟ್ಟಾರೆ, ವ್ಯಾಪಾರ ವ್ಯವಹಾರ ಚೇತರಿಕೆ ಕಾಣುತ್ತಿರುವ ಹೊತ್ತಲ್ಲೇ ಲಾಕ್ ಡೌನ್ ಮಾಡಿದ್ದಕ್ಕೆ ಸಾರ್ವಜನಿಕರು ಬಾರಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಕರ್ಫ್ಯೂ ನಿಯಮಗಳು ಎಷ್ಟರ ಮಟ್ಡಿಗೆ ಪಾಲನೆ ಆಗಲಿವೆ ಅನ್ನೋದನ್ನು ಕಾದು ನೋಡಬೇಕಿದೆ.
Kshetra Samachara
03/09/2021 07:02 pm