ಮಣಿಪಾಲ: ಇತ್ತೀಚೆಗೆ ಬ್ರಹ್ಮಾವರ ತಾಲೂಕಿ ಕೊಕ್ಕರ್ಣೆಯಲ್ಲಿ ರಸ್ತೆ ಅಪಘಾತಕಕ್ಕೀಡಾಗಿದ್ದ ನವೀನ್( 38) ಎಂಬ ವ್ಯಕ್ತಿ ಆರು ರೋಗಿಗಳಿಗೆ ಅಂಗಾಂಗ ದಾನ ಮಾಡುವ ಮೂಲಕ ಅವರಿಗೆ ಜೀವದಾನ ಮಾಡಿ ಸಾರ್ಥಕ ಸಾವು ಕಂಡಿದ್ದಾರೆ.
ನವೀನ್ ,ರಸ್ತೆ ಅಪಘಾತಕ್ಕೀಡಾಗಿ ತೀವ್ರ ಗಾಯಗಳೊಂದಿಗೆ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲಕ್ಕೆ ದಾಖಲಾಗಿದ್ದರು.ಕೆಎಂಸಿ ವೈದ್ಯರು ಅವರನ್ನು ರಕ್ಷಿಸಲು ಪ್ರಯತ್ನಿಸಿದರೂ, ಅವರು ಚೇತರಿಸಿಕೊಳ್ಳುವ ಯಾವುದೇ ಲಕ್ಷಣಗಳು ಕಂಡು ಬಂದಿರಲಿಲ್ಲ.ಅವರ ಬಹುತೇಕ ಅಂಗಾಂಗಳು ನಿಷ್ಕ್ರಿಯಗೊಂಡಿದ್ದವು.
ನವೀನ್ ಅವರ ಪತ್ನಿ ಮಲ್ಲಿಕಾ ಮತ್ತು ಅವರ ಕುಟುಂಬ ಸದಸ್ಯರು ಇತರ ರೋಗಿಗಳ ಜೀವ ಉಳಿಸಲು ಅಂಗಗಳನ್ನು ದಾನ ಮಾಡಲು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದರು. ಅದರಂತೆ ಎರಡು ಮೂತ್ರಪಿಂಡಗಳು, ಯಕೃತ್ತು, ಚರ್ಮ ಮತ್ತು ಎರಡು ಕಾರ್ನಿಯಾಗಳು/ಕಣ್ಣುಗುಡ್ಡೆಗಳನ್ನು ತೆಗೆದು 6 ಜನರ ಜೀವ ಉಳಿಸಲು ಸಹಾಯವಾಗಿದೆ.
ಈ ಪೈಕಿ ಎರಡು ಕಾರ್ನಿಯಾಗಳು ಮತ್ತು ಒಂದು ಮೂತ್ರಪಿಂಡ ಮತ್ತು ಚರ್ಮ ವನ್ನು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ರೋಗಿಗಳಿಗೆ ಬಳಸಲಾಯಿತು. ನವೀನ್ ಅವರ ಯಕೃತ್ತು ಮತ್ತು ಒಂದು ಕಿಡ್ನಿಯನ್ನು ಕೆ.ಎಂ.ಸಿ ಆಸ್ಪತ್ರೆಯಿಂದ ಇವತ್ತು ಝೀರೋ ಟ್ರಾಫಿಕ್ ಮೂಲಕ ಮಂಗಳೂರಿಗೆ ಕಳುಹಿಸಿಕೊಡಲಾಯಿತು.
PublicNext
11/06/2022 06:02 pm