ವರದಿ: ರಹೀಂ ಉಜಿರೆ
ಕಾರ್ಕಳ: ಯುವಜನತೆ ವ್ಯಾಕ್ಸಿನ್ ಪಡೆಯಲು ಇನ್ನೂ ಹಿಂದೆಮುಂದೆ ನೋಡುತ್ತಿರುವಾಗ ಕಾರ್ಕಳದ ಈ ಶತಾಯುಷಿ ಎಲ್ಲರಿಗೂ ಮಾದರಿಯಾಗಿದ್ದಾರೆ.ಕೆಲ ದಿನಗಳ ಹಿಂದೆ ಶತಾಯುಷಿ ರತಿ ಪೂಜಾರ್ತಿ ಲಸಿಕೆ ಪಡೆಯುತ್ತಿರುವ ವಿಡಿಯೋ ವೈರಲ್ ಆಗಿತ್ತು.ಸದ್ಯ ಈಕೆ ಈಗ ಜಿಲ್ಲೆಯಲ್ಲಿ ಲಸಿಕೆ ಅಭಿಯಾನಕ್ಕೆ ಬ್ರಾಂಡ್ ಅಂಬಾಸಿಡರ್ ರೀತಿ ಸುದ್ದಿಯಲ್ಲಿದ್ದಾರೆ.
ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದಲ್ಲಿ ವಾಸವಾಗಿರುವ ಈಕೆ ಸ್ಫೂರ್ತಿಯ ಚಿಲುಮೆ. ನಾಲ್ಕು ಗಂಡು ಹಾಗೂ ನಾಲ್ಕು ಮಂದಿ ಹೆಣ್ಣು ಮಕ್ಕಳಿರುವ ತುಂಬು ಸಂಸಾರ ಇವರದ್ದು. ಇಳಿವಯಸ್ಸಿನಲ್ಲೂ ತುಂಬು ಕುಟುಂಬದೊಂದಿಗೆ ಖುಷಿಯಾಗಿರುವ ರತಿ ಪೂಜಾರ್ತಿ ಇಡೀ ಕುಟುಂಬದೊಂದಿಗೆ ತಾನು ಕೂಡ ಹೆದರದೆ ವ್ಯಾಕ್ಸಿನ್ ಪಡೆದು ಸುರಕ್ಷೆಯ ನಗೆ ಬೀರಿದ್ದಾರೆ. ಮಾತ್ರವಲ್ಲ , ಆರೋಗ್ಯವಾಗಿಯೂ ಇದ್ದಾರೆ.
ಹೀಗೆ ಭಯಪಡದೆ ವ್ಯಾಕ್ಸಿನ್ ಪಡೆದಿರುವ ರತಿ ಪೂಜಾರ್ತಿ ಕುಟುಂಬ ವರ್ಗ ಹಾಗೂ ಗ್ರಾಮದವರಲ್ಲೂ ಧೈರ್ಯ ತುಂಬಿದ್ದಾರೆ. ಈ ಬಗ್ಗೆ ಸಂತಸ ಹಂಚಿಕೊಂಡಿರುವ ರತಿ ಅವರ ಮಗ ಸದಾನಂದ ಪೂಜಾರಿ, ನಾವೆಲ್ಲ ಖುಷಿಯಲ್ಲೇ ಎರಡು ಡೋಸ್ ವ್ಯಾಕ್ಸಿನ್ ಪಡೆದಿದ್ದೇವೆ. ನನ್ನ ತಾಯಿ ಕೂಡ ಒಂದು ಡೋಸ್ ವ್ಯಾಕ್ಸಿನ್ ಪಡೆದು ಆರೋಗ್ಯವಾಗಿದ್ದಾರೆ. ಇನ್ನೊಂದು ಡೋಸ್ ಕೂಡ ಪಡೆಯಲು ತಯಾರಾಗಿದ್ದಾರೆ.
ಯುವಜನರು ವ್ಯಾಕ್ಸಿನ್ ಪಡೆದು ಸುರಕ್ಷಿತರಾಗಿರಿ ಎಂದು ಮನವಿ ಮಾಡಿದ್ದಾರೆ. ಈ ವೇಳೆ ಸಾವಿರದ ಐನೂರಕ್ಕೂ ಅಧಿಕ ಮಂದಿಗೆ ಲಸಿಕೆ ನೀಡಿ ಜಾಗೃತಿ ಮೂಡಿಸುತ್ತಿರುವ ಗ್ರಾಮದ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಕುಮುದಾವತಿ ,ಅದೆಷ್ಟೋ ಮಂದಿ ವ್ಯಾಕ್ಸಿನ್ ಗೆ ಹೆದರುತ್ತಿದ್ದಾರೆ. ಹಿಂದೇಟು ಹಾಕುತ್ತಿದ್ದಾರೆ. ಆದರೆ ರತಿ ಅವರು 101ವಯಸ್ಸಾದರೂ ಖುಷಿಯಲ್ಲೇ ವ್ಯಾಕ್ಸಿನ್ ಪಡೆದಿದ್ದಾರೆ.ಇದು ಎಲ್ಲರಿಗೂ ಮಾದರಿ ಎಂದಿದ್ದಾರೆ.
Kshetra Samachara
14/12/2021 07:07 pm