ವಿಶೇಷ ವರದಿ: ರಹೀಂ ಉಜಿರೆ
ಉಡುಪಿ: ಉಡುಪಿಯ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕೊನೆಗೂ ಸರಕಾರದ ತೆಕ್ಕೆಗೆ ಬಂದಿದೆ. ಈ ಮೂಲಕ ಹಲವು ವರ್ಷಗಳ ಶಾಪ ವಿಮೋಚನೆ ಆದಂತಾಗಿದೆ.
ಉಡುಪಿಯ ಸರಕಾರಿ ತಾಯಿ ಮತ್ತು ಮಕ್ಕಳ ಅಸ್ಪತ್ರೆಯನ್ನು ಎನ್ನಾರೈ ದೊರೆ ಬಿ.ಆರ್ ಶೆಟ್ಟರಿಗೆ ಪರಭಾರೆ ಮಾಡಿದ್ದು ಹಳೆ ಸುದ್ದಿ. ಸಾಕಷ್ಟು ವಿರೋಧಗಳ ನಡುವೆಯೂ ಈ ಆಸ್ಪತ್ರೆಯ ಜಾಗವನ್ನು ಬಿ.ಆರ್ ಶೆಟ್ಟಿಗೆ ನೀಡಿ, ಅದಕ್ಕೆ ಪ್ರತಿಯಾಗಿ ಸುಸಜ್ಜಿತ ಆಸ್ಪತ್ರೆ ಕಟ್ಟಿ ಬಡವರಿಗೆ ಉತ್ತಮ ಅರೋಗ್ಯ ಸೇವೆ ನೀಡಬೇಕು ಎಂದು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅದರಂತೆ ಬಿ.ಆರ್ ಶೆಟ್ಟಿ ಅತ್ಯುತ್ತಮ ಆಸ್ಪತ್ರೆ ಕಟ್ಟಿಸಿ ಉತ್ತಮ ಸೇವೆಯನ್ನೂ ನೀಡುತ್ತಿದ್ದರು. ಬಡವರ ದುರದೃಷ್ಟವೋ ಏನೋ ಬಿ.ಆರ್ ಶೆಟ್ಟಿ ದಿವಾಳಿಯಾದರು. ಅವರೊಂದಿಗೆ ಆಸ್ಪತ್ರೆಯೂ ದಿವಾಳಿ ಎದ್ದಿತು. ಇದರ ನೇರ ಪರಿಣಾಮ ಬಿದ್ದದ್ದು ಉಡುಪಿ ಮತ್ತು ಸುತ್ತಮುತ್ತ ಊರಿನ ಬಡವರ ಮೇಲೆ. ಕಳೆದ ಮೂರು ವರ್ಷಗಳಿಂದ ಅಸ್ಪತ್ರೆ ನಿರ್ವಹಣೆಯೇ ಕಷ್ಡವಾಗುತ್ತು. ಸಿಬ್ಬಂದಿಗೆ ಮತ್ತು ವೈದ್ಯರಿಗೆ ತಿಂಗಳ ವೇತನವೂ ಪಾವತಿಯಾಗುತ್ತಿರಲಿಲ್ಲ. ಆಸ್ಪತ್ರೆ ಸಿಬ್ಬಂದಿ ವೇತನಕ್ಕಾಗಿ ತಿಂಗಳಿಗೊಮ್ಮೆ ಪ್ರತಿಭಟನೆ ಧರಣಿ ಕುಳಿತುಕೊಳ್ಳುತ್ತಿದ್ದರು. ಇದೀಗ ಶಾಪ ವಿಮೋಚನೆ ಆಗಿದ್ದು, ಆಸ್ಪತ್ರೆಯನ್ನು ಸರಕಾರ ವಶಕ್ಕೆ ಪಡೆದಿದ್ದು ನಿರ್ವಹಣೆ ಮಾಡಲು ಸಂಪುಟದಲ್ಲಿ ಒಪ್ಪಿಗೆ ಸಿಕ್ಕಿದೆ.
ಸದ್ಯ ಇಲ್ಲಿ 200 ಬೆಡ್‌ಗಳಿವೆ. ಇದರೊಂದಿಗೆ ಪ್ರಸ್ತುತ ಇರುವ ಎಲ್ಲ ಸಿಬ್ಬಂದಿಗಳ ಸಹಿತ 103 ಮಂದಿ ಹೆಚ್ಚುವರಿ ಸಿಬ್ಬಂದಿ ನೇಮಿಸಲು ಸರಕಾರ ಒಪ್ಪಿದೆ. ವಾರ್ಷಿಕ 9.83 ಕೋಟಿ ಅನುದಾನ ನೀಡಲು ಅನುಮೋದನೆ ಸಿಕ್ಕಿದೆ. ಉಡುಪಿ ಜನತೆಗೆ ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ಕೈಗೊಂಡ ಈ ನಿರ್ಣಯಕ್ಕೆ ಖ್ಯಾತ ಮನೋವೈದ್ಯ ಡಾ.ಪಿ.ವಿ ಭಂಡಾರಿ ಧನ್ಯವಾದ ಹೇಳಿದ್ದಾರೆ.
ಬಡ ಹೆಣ್ಣು ಮಕ್ಕಳಿಗೆ ಉಚಿತ ಹೆರಿಗೆ ಸೇವೆ ಒದಗಿಸುವ ನಿಟ್ಟಿನಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದ ಹೆಗ್ಗಳಿಕೆ ಈ ಆಸ್ಪತ್ರೆಗಿತ್ತು. ಮುಂದೆ ಸರಕಾರ ಇದೇ ರೀತಿ ಬಡವರಿಗೆ ಉತ್ತಮ ಆರೋಗ್ಯ ಸೇವೆ ನೀಡಲಿ ಎಂಬ ಆಶಯ ಇಲ್ಲಿನ ಜನರದ್ದಾಗಿದೆ.
PublicNext
31/03/2022 09:32 pm