ಮಂಗಳೂರು: ನಗರದ ಮೆಡಿಕಲ್, ನರ್ಸಿಂಗ್ ಹಾಗೂ ಇನ್ನಿತರ ಶಿಕ್ಷಣ ಸಂಸ್ಥೆಗಳಲ್ಲಿ ಕೇರಳದ ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕು ಕಂಡು ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಎಲ್ಲ ಕಾಲೇಜುಗಳ ಕೇರಳದ ವಿದ್ಯಾರ್ಥಿಗಳನ್ನು ಗುರುತಿಸಿ, ಅವರೆಲ್ಲರನ್ನೂ ಕೋವಿಡ್ ತಪಾಸಣೆಗೊಳಪಡಿಸಲಾಗುವುದು ಎಂದು ದ.ಕ. ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕ್ಷಣ ಸಂಸ್ಥೆಗಳು ಕೋವಿಡ್ ತಪಾಸಣೆ ನಡೆಸದೆ ಅವರನ್ನು ಕಾಲೇಜುಗಳಿಗೆ ತೆಗೆದುಕೊಳ್ಳದಂತೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಈ ಮೂಲಕ ಕೋವಿಡ್ ಪ್ರಕರಣಗಳನ್ನು ಕಡಿಮೆ ಮಾಡಲು ಜಿಲ್ಲಾಡಳಿತದಿಂದ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದರು.
ಕೇರಳ ಹಾಗೂ ದ.ಕ. ಜಿಲ್ಲೆಯ ಗಡಿ ಭಾಗಗಳಲ್ಲಿ ನಿತ್ಯ ಸಂಚಾರ ನಡೆಸುವವರಿಗೆ 15 ದಿನಗಳಿಗೊಮ್ಮೆ ಕೋವಿಡ್ ತಪಾಸಣೆ ನಡೆಸುವ ರೀತಿಯಲ್ಲಿ ವ್ಯವಸ್ಥೆ ಮಾಡಲಾಗುತ್ತದೆ. ಲಾಕ್ಡೌನ್ ಸಂದರ್ಭ 1000 ಮಂದಿ ಕೋವಿಡ್ ಪಾಸ್ ಪಡೆದುಕೊಂಡಿದ್ದು, 500ರಷ್ಟು ಅಧಿಕಾರಿಗಳ ಮೂಲಕ ಅವರು ಕೆಲಸ ಮಾಡುವಲ್ಲಿ ಅವರ ಸುತ್ತಮುತ್ತ ಇರುವವರನ್ನು 15 ದಿನಗಳಿಗೊಮ್ಮೆ ತಪಾಸಣೆ ನಡೆಸುವ ವ್ಯವಸ್ಥೆ ಮಾಡಲಾಗಿದೆ. ಗಡಿ ಪ್ರದೇಶವಾದ್ದರಿಂದ ಜನಸಂಚಾರಕ್ಕೆ ಯಾವುದೇ ತೊಂದರೆ ಮಾಡದೆ ಕೋವಿಡ್ ನಿಗ್ರಹ ಮಾಡುವುದು ಬಹಳ ಸವಾಲಿನ ಕೆಲಸ. ದ.ಕ. ಜಿಲ್ಲೆಯಲ್ಲಿ 6-8 ಸಾವಿರ ವಿದ್ಯಾರ್ಥಿಗಳು ಕೇರಳದವರೇ ಇದ್ದಾರೆ. ಈಗಾಗಲೇ ಸಾಕಷ್ಟು ವಿದ್ಯಾರ್ಥಿಗಳು ಸೋಂಕಿತರಾಗಿರುವುದು ಕಂಡು ಬಂದಿದೆ. ಆದ್ದರಿಂದ ಕಡ್ಡಾಯವಾಗಿ ಎಲ್ಲರಿಗೂ ಸೋಂಕು ತಪಾಸಣೆ ನಡೆಸುವ ಕಾರ್ಯ ಮಾಡಲಾಗುತ್ತದೆ ಎಂದು ಹೇಳಿದರು.
ಕೋವಿಡ್ ಮುಂಜಾಗ್ರತೆ ಕ್ರಮ ವಹಿಸಲು ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಕಂದಾಯ ಇಲಾಖೆ ಹಾಗೂ ಕಮಿಷನರೇಟ್ ವತಿಯಿಂದ ಚರ್ಚೆ ನಡೆಸಲಾಗಿದ್ದು, ಮಾಸ್ಕ್ ಕಡ್ಡಾಯ ಧಾರಣೆಗೆ ತಂಡ ರಚನೆ ಮಾಡಲಾಗುತ್ತದೆ. ಈ ತಂಡಗಳು ವಿವಿಧ ಅಂಗಡಿ-ಮುಂಗಟ್ಟುಗಳು, ಕಚೇರಿ, ಇನ್ನಿತರ ಸಂಸ್ಥೆಗಳಿಗೆ ದಾಳಿ ನಡೆಸಿ ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವ, ಉದ್ದಿಮೆ ಪರವಾನಿಗೆ ರದ್ದುಗೊಳಿಸುವ ಕಾರ್ಯವನ್ನು ಚುರುಕುಗೊಳಿಸಲಾಗುತ್ತದೆ ಎಂದು ತಿಳಿಸಿದರು.
ಸಾರಿಗೆ ಸಂಚಾರಿ ವಾಹನಗಳಲ್ಲಿಯೂ ಕಡ್ಡಾಯ ಮಾಸ್ಕ್ ಧಾರಣೆಯ ಬಗ್ಗೆ ಚರ್ಚೆ ನಡೆಸಲಾಗಿದೆ. ಅಲ್ಲದೆ, ಅಗತ್ಯವಿರುವೆಡೆಗಳಲ್ಲಿ ರ್ಯಾಟ್(RAT) ತಪಾಸಣೆ (ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್), ಆರ್‌ಟಿಪಿಸಿಆರ್ ತಪಾಸಣೆ ನಡೆಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದರು.
Kshetra Samachara
08/02/2021 05:22 pm