ಕುಂದಾಪುರ: ಸರಕಾರಿ ಅಧಿಕಾರಿಗಳು, ವೈದ್ಯರು ಮತ್ತು ಶಿಕ್ಷಕರು ಒಂದೂರಿಂದ ಇನ್ನೊಂದು ಊರಿಗೆ ವರ್ಗಾವಣೆ ಆಗೋದು ಸಾಮಾನ್ಯ. ಆದರೆ ಕೆಲವೇ ಕೆಲವು ಸರಕಾರಿ ನೌಕರರು ವರ್ಗಾ ಆಗಿ ಇನ್ನೊಂದೂರಿಗೆ ಹೋಗುವಾಗ ಊರ ಜನರು ಭಾವುಕರಾಗುವುದಿದೆ. ಇಂತಹದ್ದೇ ಒಂದು ಪ್ರಸಂಗಕ್ಕೆ ಆವರ್ಸೆ ಎಂಬ ಗ್ರಾಮ ಸಾಕ್ಷಿಯಾಯಿತು.
"ನಾನು ಇನ್ನು ಮುಂದೆ ಬೇರೆ ಗ್ರಾಮದ ಸೇವೆಗೆ ನಿಯುಕ್ತಳಾಗಿದ್ದೇನೆ. ಸರಕಾರಿ ಆದೇಶ ಪಾಲನೆ ನನ್ನ ಆದ್ಯ ಕರ್ತವ್ಯ" ಎಂದು ಆ ವೈದ್ಯೆ ಹೇಳುತ್ತಿದ್ದಂತೆ ನೆರೆದ ಜನಸ್ತೋಮ ಒಮ್ಮೆಲೆ ಕಣ್ಣೀರಾಯಿತು. ಮಕ್ಕಳು, ಮಹಿಳೆಯರು, ಹಿರಿಯರು, ಕಿರಿಯರೆನ್ನದೆ ಒಬ್ಬೊಬ್ಬರಾಗಿ ಶುಭ ಕೋರಲು ಬಂದಾಗ ಅವರ ಕಂಗಳಲ್ಲಿ ಒಂದೇ ಸವನೆ ಕಂಬನಿ ಸುರಿಯುತ್ತಿತ್ತು. ಕೆಲವರು ಕಾಲಿಗೆರಗಿ ನೀವು ಎಲ್ಲಿಗೂ ಹೋಗಬೇಡಿ, ನಮ್ಮ ಊರಲ್ಲೇ ಇರಿ ಎಂದು ಅತ್ತು ಬಿಟ್ಟರು.
ಬ್ರಹ್ಮಾವರ ತಾಲೂಕಿನ ಗ್ರಾಮೀಣ ಪ್ರದೇಶ ಆವರ್ಸೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ. ಸವಿತಾ ಕುಂದರ್ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಊರಿಗೆ ಊರೇ ಮರುಗಿದ ಪ್ರಸಂಗವಿದು.
ಎಂಬಿಬಿಎಸ್ ಪದವಿ ಪೂರೈಸಿದ ಬಳಿಕ ಗ್ರಾಮಾಂತರ ಪ್ರದೇಶ ಆವರ್ಸೆಯಲ್ಲಿ ಪ್ರಥಮವಾಗಿ ಸೇವೆ ಆರಂಭಿಸಿದ್ದ ಇವರು ಕಳೆದ 12 ವರ್ಷಗಳಿಂದ ಸೇವೆಯಲ್ಲಿದ್ದರು. ಆವರ್ಸೆ, ಹಿಲಿಯಾಣ, ನಂಜಾರು, ವಂಡಾರು ಮುಂತಾದ ಗ್ರಾಮಗಳ ಜನರಿಗೆ ಬಹಳ ಕಾಳಜಿಯಿಂದ ವೈದ್ಯಕೀಯ ಸೇವೆ ಸಲ್ಲಿಸಿದ್ದರು. ಜನರಿಗೆ ತೀರಾ ಹತ್ತಿರವಾಗಿ, ಅವರ ಬಂಧುವಿನಂತೆ ಇದ್ದವರು ಡಾ.ಸವಿತಾ ಕುಂದರ್. ಹೀಗಾಗಿ ಬೀಳ್ಕೊಡುವ ಹೊತ್ತಲ್ಲಿ ಗ್ರಾಮಸ್ಥರ ಭಾವನೆ ವೈದ್ಯೆಯ ಸೇವೆಯ ಮಹತ್ವವನ್ನು ಸಾರಿ ಹೇಳುತ್ತಿತ್ತು.
Kshetra Samachara
05/08/2022 02:12 pm