ಉಡುಪಿ: ಉಡುಪಿ ನಗರದ ಕೆಎಸ್ಆರ್‌ಟಿಸಿ ಬಸ್ ಸ್ಟ್ಯಾಂಡ್, ಸಿಟಿ ಬಸ್ ನಿಲ್ದಾಣ, ಕಲ್ಸಂಕ ಜಂಕ್ಷನ್ ಮತ್ತು ಇಂದ್ರಾಳಿ ಸೇತುವೆಗೆ ಜಿಲ್ಲಾಧಿಕಾರಿ ಕೂರ್ಮಾ ರಾವ್ ಮತ್ತು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಕ್ಷಯ್ ಮಚ್ಚೀಂದ್ರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸಂಚಾರ ದಟ್ಟಣೆಯಿಂದ ಆಗುತ್ತಿರುವ ಸಮಸ್ಯೆಯ ಬಗ್ಗೆ ಪರಿಶೀಲನೆ ನಡೆಸಿದರು.
ಜಿಲ್ಲಾಧಿಕಾರಿ ಕೂರ್ಮಾ ರಾವ್ ಅವರು ಹಳೇ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ರಾತ್ರಿ ಬೆಂಗಳೂರು ತೆರಳುವ ಖಾಸಗಿ ಬಸ್‌ಗಳನ್ನು ನಿಲುಗಡೆಗೊಳಿಸಲು ಸಾಧ್ಯವಿದೆಯಾ ಎಂದು ಪರಿಶೀಲಿಸಿದರು. ನಂತರ ಸರ್ವೀಸ್ ಬಸ್ ನಿಲ್ದಾಣದಲ್ಲಿ ರಾತ್ರಿ 8 ಗಂಟೆಯ ನಂತರ ಬೆಂಗಳೂರು ತೆರಳುವ ಬಸ್‌ಗಳನ್ನು ನಿಲ್ಲಿಸಲು ಜಿಲ್ಲಾಧಿಕಾರಿಯವರು ಸೂಚಿಸಿದರು.
ಕುಂದಾಪುರ ಕಡೆಯಿಂದ ಬರುವ ಬಸ್‌ಗಳು ಸಿಟಿ ಬಸ್ ನಿಲ್ದಾಣದ ಬಳಿ ತಿರುವ ಪಡೆದು ಸರ್ವೀಸ್ ಬಸ್ ನಿಲ್ದಾಣಕ್ಕೆ ಹೋಗುವಲ್ಲಿ ಟ್ರಾಫಿಕ್ ಕೋನ್‌ಗಳು ತುಂಡಾಗಿ ಮೊಳೆಗಳು ರಸ್ತೆಯಲ್ಲಿಯೇ ಉಳಿದಿವೆ. ಈ ಅವಶೇಷಗಳನ್ನು ತುರ್ತಾಗಿ ವಿಲೇವಾರಿಗೊಳಿಸುವಂತೆ ಹೆದ್ದಾರಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಕಲ್ಸಂಕ ಜಂಕ್ಷನ್‌ನಲ್ಲಿ ಸಿಟಿಯಿಂದ ಅಂಬಾಗಿಲು ಕಡೆಗೆ ತಿರುಗುವಲ್ಲಿ ಪಾದಚಾರಿ ಮಾರ್ಗವು ದೊಡ್ಡದಾಗಿದ್ದು, ಅದನ್ನು ಕಿರಿದು ಮಾಡಿ ರಸ್ತೆಯನ್ನು ಅಗಲಗೊಳಿಸಲು ಸೂಚಿಸಿದಲ್ಲದೇ, ಅಂಬಾಗಿಲಿನಿಂದ ಕಲ್ಸಂಕ, ಮಣಿಪಾಲಕ್ಕೆ ತಿರುಗುವಲ್ಲಿ ಫ್ರೀ ಲೆಫ್ಟ್ ಮಾಡಲು ತಾತ್ಕಾಲಿಕ ಯೋಜನೆ ರೂಪಿಸಲು ಸೂಚಿಸದರು. ಮಣಿಪಾಲದಿಂದ ಕಲ್ಸಂಕ ಜಂಕ್ಷನ್ ಮೂಲಕ ಕೃಷ್ಣ ಮಠದ ಕಡೆಗೆ ಹೋಗುವಲ್ಲಿ ಡಿವೈಡರ್ ಮಾದರಿಯಲ್ಲಿ ವಿಭಾಜಕ ನಿರ್ಮಿಸುವುದು ಹಾಗೂ ಝೀಬ್ರಾ ಕ್ರಾಸ್ ಹಾಕಬೇಕೆಂದು ಸೂಚಿಸಿದರು.
Kshetra Samachara
22/09/2022 06:00 pm