ಮಂಗಳೂರು: ವರ್ಷಂಪ್ರತಿ ಬೆಂಗಳೂರಿನಲ್ಲಿ ರಾಜ್ಯಮಟ್ಟದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಯನ್ನು ಆಚರಿಸಲಾಗುತ್ತಿತ್ತು. ಆದರೆ ಈ ಬಾರಿ ಮಂಗಳೂರು ನಗರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಯನ್ನು ಸೆ.10ರಂದು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್ ಹೇಳಿದ್ದಾರೆ.
ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಿದ್ದತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಒಂದು ಸಮುದಾಯಕ್ಕೆ ಸೀಮಿತವಾದ ಆಚರಣೆಯಲ್ಲ, ಎಲ್ಲಾ ಸಮುದಾಯಗಳೂ ಒಟ್ಟಾಗಿ ಸೇರಿ ಆಚರಿಸಬೇಕು. ಆ ಹಿನ್ನೆಲೆಯಲ್ಲಿ ಜಿಲ್ಲೆಯ ಜನತೆಯ ಸಹಭಾಗಿತ್ವ ಅಗತ್ಯ, ಎಲ್ಲರೂ ಸಹಕರಿಸುವಂತೆ ಅವರು ಮನವಿ ಮಾಡಿದರು.
ಸೆ.10ರಂದು ಸಂಜೆ 4 ಗಂಟೆಗೆ ರಾಜ್ಯ ಮಟ್ಟದ ಹಾಗೂ ಜಿಲ್ಲೆಯ ವೈವಿಧ್ಯಮಯ ಕಲಾತಂಡಗಳಿಂದ ಮೆರವಣಿಗೆ ಆಯೋಜಿಸಲಾಗುವುದು, ನಾರಾಯಣ ಗುರುಗಳ ಚರಿತ್ರೆ ಬಿಂಬಿಸುವ ಚಿತ್ರಪ್ರದರ್ಶನವನ್ನು ಏರ್ಪಡಿಸಲಾಗುತ್ತದೆ. ಸಂಜೆ 6ಗಂಟೆಗೆ ಸಭಾ ಕಾರ್ಯಕ್ರಮವನ್ನು ಟಿ.ಎಂ.ಎ.ಪೈ ಭವನದಲ್ಲಿ ಆಯೋಜಿಸಲಾಗುವುದು, ನುರಿತ ಉಪನ್ಯಾಸಕಾರರಿಂದ ಉಪನ್ಯಾಸವನ್ನು ಏರ್ಪಡಿಸಲಾಗುವುದು, ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಲಾಗುವುದು ಎಂದು ಹೇಳಿದರು.
Kshetra Samachara
05/09/2022 08:44 pm