ಮಂಗಳೂರು: ರಾಜ್ಯ ಬಾಲಭವನದಲ್ಲಿನ ಪ್ರೋಗ್ರಾಂ ಸಹಾಯಕ ಹಾಗೂ ಸಹಾಯಕರ ಹುದ್ದೆ ಖಾಯಮಾತಿಗೆ ಸರಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದೆ. ಸರಕಾರದಿಂದ ಈ ಬಗ್ಗೆ ಅನುಮೋದನೆ ದೊರಕಿದ ಕೂಡಲೇ ಗ್ರೂಪ್ ಡಿ ನೌಕರರ ದರ್ಜೆಗೆ ಅವರ ವೇತನ ಏರಿಕೆ ಮಾಡಲಾಗುತ್ತದೆ ಎಂದು ರಾಜ್ಯ ಬಾಲಭವನದ ಸೊಸೈಟಿ ಅಧ್ಯಕ್ಷೆ ಚಿಕ್ಕಮ್ಮ ಬಸವರಾಜ್ ಹೇಳಿದರು.
ನಗರದ ಕದ್ರಿಯಲ್ಲಿನ ಬಾಲಭವನದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಅಲ್ಲದೆ ರಾಜ್ಯದ 30 ಬಾಲಭವನದಲ್ಲಿ 10 ಬಾಲಭವನಕ್ಕೊಬ್ಬರಂತೆ ಮೂರು ವಿಶೇಷ ಅಧಿಕಾರಿಗಳನ್ನು ನೇಮಕ ಮಾಡುವ ಪ್ರಸ್ತಾವವನ್ನೂ ಸರಕಾರಕ್ಕೆ ಕಳುಹಿಸಲಾಗಿದ್ದು, ಸರಕಾರದಿಂದ ಅನುಮೋದನೆ ದೊರಕಿದ ತಕ್ಷಣ ಈ ಹುದ್ದೆಯನ್ನೂ ಖಾಯಂಗೊಳಿಸಲಾಗುತ್ತದೆ. ಈ ಮೂಲಕ ಬಾಲಭವನದ ಒಟ್ಟು 63 ನೌಕರರನ್ನು ಖಾಯಂ ಗೊಳಿಸುವ ಪ್ರಸ್ತಾವವನ್ನು ಸರಕಾರದ ಮುಂದೆ ಕಳುಹಿಸಲಾಗಿದೆ ಎಂದರು.
ಬಾಲಭವನದ ಅಭಿವೃದ್ಧಿ, ಅಗತ್ಯತೆಗಳ ಬಗ್ಗೆ ರಾಜ್ಯ ಬಾಲಭವನ ಸೊಸೈಟಿಗೆ ಪ್ರಸ್ತಾವನೆ ಸಲ್ಲಿಸಿದಲ್ಲಿ ಅದನ್ನು ಪೂರೈಸಲಾಗುತ್ತದೆ. ಅಲ್ಲದೆ ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದ ಕದ್ರಿಯಲ್ಲಿನ ಬಾಲಭವನದಿಂದ ಕಟ್ಟಡ, ಆವರಣ ಗೋಡೆ ಹಾಗೂ ಆಟಿಕೆ ಸಾಮಗ್ರಿ ದುರಸ್ತಿಗಾಗಿ ಈಗಾಗಲೇ 25 ಲಕ್ಷ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಪ್ರಸ್ತಾವನೆ ಕಡಿಮೆಯಾಗಿದ್ದು, ಇನ್ನೂ ಹೆಚ್ಚಿನ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲು ಚಿಕ್ಕಮ್ಮ ಬಸವರಾಜ್, ಬಾಲಭವನದ ಪ್ರೋಗ್ರಾಂ ಅಸಿಸ್ಟೆಂಟ್ ಅವರಿಗೆ ಸೂಚನೆ ನೀಡಿದರು.
Kshetra Samachara
17/02/2021 08:21 pm