ಮಂಗಳೂರು: ನಗರದ ಹೊರವಲಯದಲ್ಲಿರುವ ಮಳಲಿಯಲ್ಲಿ ನಡೆದ ತಾಂಬೂಲ ಪ್ರಶ್ನೆ ಹಿನ್ನೆಲೆಯಲ್ಲಿ ವಿಚಾರವಾದಿಯೊಬ್ಬರು ಜ್ಯೋತಿಷ್ಯಕ್ಕೆ ಸವಾಲೊಡ್ಡಿದ್ದಾರೆ. ತಾವು ಸೀಲ್ ಮಾಡಿರುವ ಕವರ್ ನಲ್ಲಿ ಏನಿದೆ ಎಂದು ಹೇಳಿದ 50 ಮಂದಿಗೆ ತಲಾ 1ಲಕ್ಷ ರೂ. ಬಹುಮಾನ ಘೋಷಿಸಿದ್ದಾರೆ.
ಹೌದು. ಮಳಲಿಯಲ್ಲಿನ ಮಂದಿರ - ಮಸೀದಿ ವಿವಾದದ ತಾಂಬೂಲ ಪ್ರಶ್ನೆಯು ಹೊಸ ಹೊಸ ಆಯಾಮವನ್ನು ಹುಟ್ಟುಹಾಕುತ್ತಿದೆ. ಇದೀಗ ಮಂಗಳೂರಿನ ಖ್ಯಾತ ವಿಚಾರವಾದಿ ನರೇಂದ್ರ ನಾಯಕ್ ಅವರು ತಾಂಬೂಲ ಪ್ರಶ್ನೆಯ ಹಿನ್ನೆಲೆಯಲ್ಲಿ ಜೋತಿಷ್ಯಕ್ಕೆ ಸವಾಲೆಸೆದಿದ್ದಾರೆ. ಅವರು ನಿನ್ನೆ ಬೆಳಗ್ಗೆ 11.33 ಗಂಟೆಗೆ ಏಳು ಲಕೋಟೆಗಳನ್ನು ಸೀಲ್ ಮಾಡಿ ಇಟ್ಟಿದ್ದಾರೆ. ಅದರಲ್ಲಿ ಕರೆನ್ಸಿ, ಕಾಗದಗಳನ್ನು ಇಟ್ಟಿದ್ದಾರೆ. ಸವಾಲು ಸ್ವೀಕರಿಸುವವರು ಏಳು ಲಕೋಟೆಗಳಲ್ಲಿ ಆರು ಕವರ್ ಗಳನ್ನು ಆಯ್ಕೆ ಮಾಡಿ ಅದರಲ್ಲಿ ಐದಕ್ಕೆ ನಿಖರವಾದ ಉತ್ತರ ಹೇಳಿದ 50 ಮಂದಿಗೆ ತಲಾ ಒಂದು ಲಕ್ಷ ರೂ. ಬಹುಮಾನ ಘೋಷಣೆ ಮಾಡಿದ್ದಾರೆ.
ಆ ಕವರ್ ನೊಳಗಡೆ ಕರೆನ್ಸಿ ಇದೆಯೆಂದಾದರೆ ಅದು ಯಾವ ದೇಶದ್ದು, ಸೀರಿಯಲ್ ನಂಬರ್, ಎಷ್ಟು ರೂ. ನೋಟು ಹೀಗೆ ಖಚಿತವಾಗಿ ಹೇಳಬೇಕು. ಅದೇ ರೀತಿ ಕಾಗದವಾದಲ್ಲಿ ಅದು ಖಾಲಿ ಕಾಗದವೇ ಅಥವಾ ಏನು ಬರೆದಿದೆ ಎಂದು ಹೇಳಬೇಕು. ಈ ಸವಾಲಿಗೆ ಉತ್ತರ ನೀಡಲು ಮೇ 30ರ ಮಧ್ಯರಾತ್ರಿಯವರೆಗೆ ಅವಕಾಶವಿದೆ. ಆ ಬಳಿಕ ಬರುವ ಉತ್ತರವನ್ನು ಮಾನ್ಯತೆ ಆಗೋದಿಲ್ಲ. ಸವಾಲೆಸೆದ ಲಕೋಟೆಯನ್ನು ಜೂನ್ ಒಂದರಂದು ಬೆಳಗ್ಗೆ 10.30ಕ್ಕೆ ಲೇಡಿಹಿಲ್ ನಲ್ಲಿರುವ ಪ್ರೆಸ್ ಕ್ಲಬ್ ನಲ್ಲಿ ಎಲ್ಲರ ಸಮ್ಮುಖದಲ್ಲಿ ತೆರೆಯಲಾಗುತ್ತದೆ. ಸವಾಲು ಸ್ವೀಕರಿಸುವವರು ಉತ್ತರವನ್ನು ನರೇಂದ್ರ ನಾಯಕ್ ಅವರ ವಾಟ್ಸ್ಆ್ಯಪ್ ನಂಬರ್ 9448216343 ಹಾಗೂ ಇಮೈಲ್ narenn@gmail.com ಗೆ ಕಳುಹಿಸಬಹುದು. ಒಟ್ಟಿನಲ್ಲಿ ಜೋತಿಷ್ಯ ಹಾಗೂ ವೈಚಾರಿಕತೆಯ ನಡುವಿನ ಸವಾಲು ಜವಾಬಿನಲ್ಲಿ ಯಾವುದು ಗೆಲುವು ಸಾಧಿಸುತ್ತದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
Kshetra Samachara
27/05/2022 06:48 pm