ವರದಿ: ರಹೀಂ ಉಜಿರೆ
ಕುಂದಾಪುರ: ಉಡುಪಿಯ ಸರಕಾರಿ ಕಾಲೇಜಿನ ಹಿಜಾಬ್ ವಿವಾದ ಬೇರೆಯೇ ಸ್ವರೂಪ ಪಡೆದುಕೊಳ್ಳುತ್ತಿದೆ.ಇಲ್ಲಿ ಕೆಲವು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ಬರುತ್ತೇವೆ ಎಂದು ಹಠ ಹಿಡಿದಿದ್ದು ಹಳೆ ವಿಷಯ.ಇದೀಗ ಕುಂದಾಪುರದ ಸರಕಾರಿ ಪಿಯು ಕಾಲೇಜಿನಲ್ಲಿ ಹಿಜಾಬ್ ಗೆ ಕೌಂಟರ್ ಆಗಿ 40 ಕ್ಲೂ ಹೆಚ್ಚು ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿ ಸೆಡ್ಡು ಹೊಡೆದಿದ್ದಾರೆ.
ಉಡುಪಿಯ ಹಿಜಾಬ್ ಧಾರಿ ವಿದ್ಯಾರ್ಥಿನಿಯರ ಹಠದಿಂದಾಗಿ ಜಿಲ್ಲೆಯಲ್ಲಿ ಶೈಕ್ಷಣಿಕ ವಾತಾವರಣ ಕೆಡುತ್ತಿದೆ.ಉಡುಪಿಯ ಸರಕಾರಿ ಕಾಲೇಜಿನಲ್ಲಿ ಆರೇಳು ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬರುತ್ತಾರೆ. ಕುಂದಾಪುರದಲ್ಲೂ ಹಿಜಾಬ್ ಧರಿಸುತ್ತಾರೆ.ಹೀಗಾಗಿ ನಮಗೂ ಕೇಸರಿ ಶಾಲು ಹಾಕಲು ಅವಕಾಶ ಕೊಡಿ ಎಂದು ಕುಂದಾಪುರ ಕಾಲೇಜಿನ ವಿದ್ಯಾರ್ಥಿಗಳು ಬೇಡಿಕೆ ಇಟ್ಟಿದ್ದಾರೆ.ಇವತ್ತು ಏಕಾಏಕಿ ನಲವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಯೇ ತಗರಗತಿಗೆ ಆಗಮಿಸಿದ್ದಾರೆ. ಇದರಿಂದಾಗಿ ಕಾಲೇಜಿನಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣಗೊಂಡಿತು.ಬಳಿಕ ಸ್ಥಳೀಯ ಶಾಸಕರ ನೇತೃತ್ವದಲ್ಲಿ ಸಭೆ ನಡೆದಿದೆ.ಸಭೆಯಲ್ಲಿ ಹಿಜಾಬ್ ಧರಿಸುವ ಪೋಷಕರನ್ನು ಕರೆಸಿ ,ಸಮವಸ್ತ್ರ ಸಂಹಿತೆ ಪಾಲಿಸುವಂತೆ ಸ್ಥಳೀಯ ಶಾಸಕರು ಮನ ವೊಲಿಸುವ ಪ್ರಯತ್ನ ಮಾಡಿದರು.ಆದರೆ ಸಂಧಾನ ವಿಫಲಗೊಂಡಿದೆ.
ಇನ್ನೊಂದೆಡೆ ಹಿಂದೂ ಜಾಗರಣ ವೇದಿಕೆಯ ವಿದ್ಯಾರ್ಥಿ ಸಂಘಟನೆ ಹಿಂದೂ ಯುವವಾಹಿನಿಯ ನಲ್ವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿ ಪಾಠ ಕೇಳಿದ್ದಾರೆ.ಇವರಿಗೆ ಬೆಂಬಲ ಸೂಚಿಸಿರುವ ಹಿಂದೂ ಜಾಗರಣ ವೇದಿಕೆ ,ಪರೀಕ್ಷೆ ಹತ್ತಿರ ಬರುವಾಗ ಪಿಎಫ್ ಐ ಮತ್ತು ಎಸ್ ಡಿಪಿಐ ವಿವಾದವನ್ನು ಬಿಗಡಾಯಿಸುವಂತೆ ಮಾಡಿದೆ.ಎಲ್ಲರಂತೆ ಮುಸ್ಲಿಂ ವಿದ್ಯಾರ್ಥಿನಿಯರು ಸಮವಸ್ತ್ರದಲ್ಲೇ ತರಗತಿಗೆ ಬರಬೇಕು.ಅವರು ಹಿಜಾಬ್ ಧರಿಸಿಯೇ ಬರುವುದಾದರೆ ನಮ್ಮ ವಿದ್ಯಾರ್ಥಿಗಳು ದಿನನಿತ್ಯ ಕೇಸರಿ ಶಾಲು ಹಾಕಿ ಬರುತ್ತಾರೆ ಎಂದು ಹೇಳಿದೆ.
ಒಟ್ಟಾರೆ ಉಡುಪಿಯ ಹಿಜಾಬ್ ವಿವಾದ ಈಗ ಕುಂದಾಪುರಕ್ಕೂ ವಿಸ್ತರಿಸಿದೆ.ಇನ್ನೇನು ದ್ವಿತೀಯ ಪಿಯುಸಿ ಪರೀಕ್ಷೆ ಕೂಡ ಹತ್ತಿರದಲ್ಲಿದೆ.ಮುಂದೆ ಈ ವಿವಾದ ಎಲ್ಲಿಗೆ ಹೋಗಿ ತಲುಪುತ್ತದೋ ಕಾದು ನೋಡಬೇಕಿದೆ.
PublicNext
02/02/2022 07:16 pm