ಮಂಗಳೂರು: ಮಂಗಳಮುಖಿಯರಲ್ಲಿ ಬಹಳಷ್ಟು ಮಂದಿ ಸಮಾಜದ ಮುಖ್ಯವಾಹಿನಿಗೆ ಬರಲು ಯತ್ನಿಸುತ್ತಿದ್ದಾರೆ. ಅವರಲ್ಲಿ ಕೆಲವರು ಸಕ್ಸೆಸ್ ಕೂಡಾ ಆಗಿದ್ದಾರೆ. ಇದೀಗ ಮಂಗಳೂರಿನ ನಾಲ್ವರು ಮಂಗಳಮುಖಿಯರು ನೃತ್ಯದಲ್ಲಿ ಸಾಧನೆ ಮಾಡಬೇಕೆಂದು ತರಬೇತಿ ಪಡೆಯುತ್ತಿದ್ದು, ಬೋಳೂರಿನ ಹಳೆಕೋಟೆ ಶ್ರೀ ಮಾರಿಯಮ್ಮ ದೇವಸ್ಥಾನದ ನವರಾತ್ರಿಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನ ಮಾಡಿ ಎಲ್ಲರಿಂದ ಸೈ ಎನಿಸಿಕೊಂಡಿದ್ದಾರೆ.
ಮಂಗಳೂರಿನ ಪ್ರಿಯಾ, ರೇಖಾ ಮತ್ತು ಸಂಧ್ಯಾ ಎಂಬ ಮಂಗಳಮುಖಿಯರು ನೃತ್ಯ ಪ್ರದರ್ಶಿಸಿದವರು. ಇವರಲ್ಲಿ ಹನಿ ಎಂಬವರು ಅನಾರೋಗ್ಯದ ಕಾರಣ ನೃತ್ಯ ಪ್ರದರ್ಶನ ಮಾಡಲು ಅಶಕ್ತರಾಗಿದ್ದಾರೆ. 'ಶ್ರೀಗಣೇಶ ದೇವಾ' ಎಂಬ ಭಕ್ತಿಗೀತೆಗೆ ಸ್ಟೆಪ್ ಹಾಕಿರುವ ಈ ಮಂಗಳಮುಖಿಯರು ಈ ಅವಕಾಶ ಗಿಟ್ಟಿಸಿಕೊಳ್ಳಲು ಬಹಳಷ್ಟು ಪ್ರಯತ್ನ ಪಟ್ಟಿದ್ದಾರೆ. ತಾವು ಜನಸಾಮಾನ್ಯರಂತೆ ಸಮಾಜದಲ್ಲಿ ಬದುಕಬೇಕೆಂಬ ನಿಟ್ಟಿನಲ್ಲಿ ಪ್ರಯತ್ನವನ್ನು ಮಾಡುತ್ತಿರುವ ಇವರಿಗೆ ಸುಸೆನ್ ಮಿಸ್ಕಿತ್ ಹಾಗೂ ಮೋಹನ್ ಎಂಬವರು ಬೆಂಬಲವಾಗಿ ನಿಂತಿದ್ದಾರೆ.
ಸುಸೆನ್ ಮಿಸ್ಕಿತ್ ಅವರಿಂದ ನೃತ್ಯ ತರಬೇತಿ ಪಡೆಯುತ್ತಿರುವ ಈ ನಾಲ್ವರು ಮಂಗಳಮುಖಿಯರು ದಿನನಿತ್ಯ ಮಣ್ಣಗುಡ್ಡೆಯಲ್ಲಿರುವ ಡ್ಯಾನ್ಸ್ ತರಗತಿಗೆ ಹಾಜರಾಗಿ ಅಭ್ಯಾಸ ಮಾಡುತ್ತಿದ್ದಾರೆ. ಬಾಲಿವುಡ್ ಸ್ಟೈಲ್ ಡ್ಯಾನ್ಸ್ ತರಬೇತಿ ಪಡೆಯುತ್ತಿರುವ ಇವರು, ವೇದಿಕೆಯಲ್ಲಿ ಭಕ್ತಿಗೀತೆಗೆ ಸ್ಟೆಪ್ ಹಾಕಿದ್ದಾರೆ.
Kshetra Samachara
05/10/2022 05:08 pm