ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಇಂದು ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಹೇಮಾವತಿ ವೀ ಹೆಗ್ಗಡೆಯವರು ಬರೆದ ಎರಡು ಕೃತಿಗಳ ಲೋಕಾರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಹೇಮಾವತಿ ಹೆಗ್ಗಡೆಯವರು ಸದಾ ಅಧ್ಯಯನ ಶೀಲರಾಗಿದ್ದು, ಸಾಹಿತ್ಯದ ಓದು, ಬರವಣಿಗೆ ಅವರ ಹವ್ಯಾಸವಾಗಿದೆ.
ಸಂದರ್ಭೋಚಿತವಾಗಿ ಲೇಖನ, ಕಥೆ, ಕವನಗಳನ್ನು ಅರ್ಥಗರ್ಭಿತವಾಗಿ ರಚಿಸುತ್ತಾರೆ. ನಾಟಕ, ಯಕ್ಷಗಾನ, ನೃತ್ಯ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೊಸ ಪರಿಕಲ್ಪನೆಯೊಂದಿಗೆ, ಮಾರ್ಗದರ್ಶನ, ಪ್ರೇರಣೆ ನೀಡುತ್ತಾರೆ ಎಂದು ಶ್ಲಾಘಿಸಿದರು.
ಮಹಿಳಾ ಸಬಲೀಕರಣಕ್ಕೆ ಅವರ ಕೊಡುಗೆ ಅಪಾರವಾಗಿದೆ. ಇಂದು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳಲ್ಲಿ ಶೇಕಡಾ 70 ರಷ್ಟು ವಿದ್ಯಾರ್ಥಿನಿಯರು ಹಾಗೂ ಶೇ.30 ವಿದ್ಯಾರ್ಥಿಗಳು ಇದ್ದಾರೆ. ಗ್ರಾಮಾಭಿವೃದ್ಧಿ ಯೋಜನೆಯಲ್ಲಿಯೂ ಶೇ.80 ರಷ್ಟು ಮಹಿಳಾ ಉದ್ಯೋಗಿಗಳು ಹಾಗೂ ಶೇ 20 ರಷ್ಟು ಪುರುಷ ನೌಕರರು ಇದ್ದಾರೆ ಎಂದು ಹೇಳಿದರು.
ಗ್ರಾಮಾಭಿವೃದ್ಧಿ ಯೋಜನೆಯಿಂದ ಮಹಿಳೆಯರಲ್ಲಿ ಧೈರ್ಯ, ಆತ್ಮವಿಶ್ವಾಸ ಹೆಚ್ಚಾಗಿ ಎಲ್ಲರೂ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ ಎಂದು ಹೆಗ್ಗಡೆಯವರು ಶ್ಲಾಘಿಸಿದರು.
Kshetra Samachara
08/03/2022 09:23 pm