ಮುಲ್ಕಿ: ಮೂಲ್ಕಿ ಸೀಮೆಯ ಒಂಬತ್ತು ಮಾಗಣೆಯ 400 ವರ್ಷಗಳ ಇತಿಹಾಸವಿರುವ ಮುಲ್ಕಿ ಸೀಮೆ ಅರಸು ಕಂಬಳ ಡಿಸೆಂಬರ್ 26 ಭಾನುವಾರದಂದು ನಡೆಯಲಿದೆ ಎಂದು ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು ಅರಮನೆಯ ಧರ್ಮ ಚಾವಡಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಅವರು ಮಾತನಾಡಿ ಇಂದು ತುಳುನಾಡಿನ ಕೆಲವು ಅರಮನೆಗಳಲ್ಲಿ ಕಂಬಳ ನಿಂತುಹೋಗಿದೆ ಕೆಲವರ ಮನೆಗಳಲ್ಲಿ ಸಾಂಪ್ರದಾಯಿಕ ಕಟ್ಟುಕಟ್ಟಳೆ ಗಳಿಗೆ ಸೀಮಿತವಾಗಿದೆ. ಆದರೆ ಮುಲ್ಕಿ ಸೀಮೆ ಅರಸು ಕಂಬಳ ಹಿಂದಿನ ಸಾಂಪ್ರದಾಯಿಕ ಆಚರಣೆ ಜೊತೆಗೆ ಆಧುನಿಕತೆಯ ಸ್ಪರ್ಶದೊಂದಿಗೆ ಅದ್ದೂರಿಯಾಗಿ ನಡೆಯುತ್ತಿದೆ. ಯಶಸ್ಸಿಗೆ ಅನೇಕರು ಕಾರಣೀಭೂತರಾಗಿದ್ದಾರೆ.
ಈ ವರ್ಷದ ಕಂಬಳ ಡಿ. 26 ಭಾನುವಾರ ಬೆಳಿಗ್ಗೆ 10.30 ಗಂಟೆಗೆ ಆರಂಭವಾಗಲಿದೆ. ಡಿಸೆಂಬರ್ 25 ರಂದು ಸಂಪ್ರದಾಯದಂತೆ ಕಂಬಳದ ಮಂಜೊಟ್ಟಿಯಲ್ಲಿ ವಿಧಿವಿಧಾನಗಳು ನಡೆದು 26 ನೇ ತಾರೀಕು ನಾಗಬನದಲ್ಲಿ ಪೂಜೆ ಸಲ್ಲಿಕೆಯಾಗಿ ಅರಮನೆಯ ಬಸದಿಯಲ್ಲಿ ಚಂದ್ರನಾಥ ಸ್ವಾಮಿ ಮತ್ತು ಪದ್ಮಾವತಿ ಅಮ್ಮನವರ ಸನ್ನಿಧಿಯಲ್ಲಿ ವಿಶೇಷ ಪೂಜಾದಿಗಳು ನೆರವೇರಲಿದೆ
ಬಳಿಕ ಸಾಮೂಹಿಕ ಪ್ರಾರ್ಥನೆಯೊಂದಿಗೆ ವಿವಿಧ ದೇವಸ್ಥಾನಗಳ ಪ್ರಸಾದ ಕಂಬಳದ ಕರೆಯಲ್ಲಿ ಹಾಕುವುದರ ಮುಖಾಂತರ ಕಂಬಳಕ್ಕೆ ಚಾಲನೆ ನೀಡಲಾಗುವುದು ಎಂದರು.
ಸುಮಾರು 150ಕ್ಕೂ ಹೆಚ್ಚು ಜೋಡಿ ಕೋಣಗಳು ಸ್ಪರ್ಧೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದ ಅವರು ಸರಕಾರದ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ನಾಗರಿಕರು ಪಾಲಿಸಿ ಕಂಬಳದ ಯಶಸ್ಸಿಗೆ ಸಹಕಾರ ನೀಡಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಂಬಳ ಸಮಿತಿ ಅಧ್ಯಕ್ಷ ರಾಮಚಂದ್ರ ನಾಯ್ಕ, ಕೋಶಾಧಿಕಾರಿ ವಿಜಯಕುಮಾರ್ ಶೆಟ್ಟಿ, ಕಾರ್ಯದರ್ಶಿ ನವೀನ್ ಕುಮಾರ್ ಶೆಟ್ಟಿ, ಭುಜಂಗ ಶೆಟ್ಟಿ ಉತ್ರಂಜೆ, ಗೌತಮ್ ಜೈನ್ ಮುಲ್ಕಿ ಅರಮನೆ, ದರ್ಶನ್ ಜೈನ್, ಗುರು ಎಂ. ರಾವ್, ಚಂದ್ರಶೇಖರ್ ಜಿ, ಶಶೀಂದ್ರ ಸಾಲ್ಯಾನ್, ಕೃಷ್ಣ ಹೆಬ್ಬಾರ್, ಅಬ್ದುಲ್ ರಜಾಕ್, ಮನ್ಸೂರ್, ದಿನೇಶ್ ಸುವರ್ಣ ಬೆಳ್ಳಾಯರು, ರಮೇಶ್ ಸುವರ್ಣ ಮತ್ತಿತರರಿದ್ದರು.
Kshetra Samachara
22/12/2021 06:25 pm