ಮೂಡುಬಿದಿರೆ: ಕೋಟಿ-ಚೆನ್ನಯ ಜೋಡುಕರೆ ಕಂಬಳ ಸಮಿತಿ ಆಶ್ರಯದಲ್ಲಿ ಕಡಲಕೆರೆ ನಿಸರ್ಗಧಾಮದ 'ವೀರ ರಾಣಿ ಅಬ್ಬಕ್ಕ' ಸಂಸ್ಕೃತಿ ಗ್ರಾಮದ ಜೋಡುಕರೆಯಲ್ಲಿ ಡಿ.11ರಂದು 19ನೇ ವರ್ಷದ ಹೊನಲು ಬೆಳಕಿನ ಕಂಬಳೋತ್ಸವ ನಡೆಯಲಿದೆ.
ಗುತ್ತಿನಮನೆ ಮಾದರಿಯಲ್ಲಿ 60 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ವೇದಿಕೆ ಅನಾವರಣ ಹಾಗೂ ಕಂಬಳ ಬಹುಭಾಷಾ ಸಿನಿಮಾದ ಚಿತ್ರೀಕರಣ ಈ ಬಾರಿಯ ವಿಶೇಷತೆ ಎಂದು ಸಮಿತಿ ಅಧ್ಯಕ್ಷ, ಶಾಸಕ ಉಮಾನಾಥ ಕೋಟ್ಯಾನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕ್ರೈಸ್ತ ಧರ್ಮಗುರು ವಂ.ವಾಲ್ಟರ್ ಡಿಸೋಜ, ಅಲಂಗಾರು ಶ್ರೀ ಮಹಾಲಿಂಗೇಶ್ವರ ದೇವಳ ಪ್ರಧಾನ ಅರ್ಚಕ ಈಶ್ವರ ಭಟ್, ಪುತ್ತಿಗೆ ನೂರಾನಿ ಮಸೀದಿ ಧರ್ಮಗುರು ಝೀಯಾವುಲ್ಲ ಹಾಗೂ ಕುಂಟಾಡಿ ಸುಧೀರ್ ಹೆಗ್ಡೆ ಕಂಬಳವನ್ನು ಬೆಳಗ್ಗೆ 7 ಗಂಟೆಗೆ ಉದ್ಘಾಟಿಸುವರು.
8 ಗಂಟೆಗೆ 'ವೀರ ರಾಣಿ ಅಬ್ಬಕ್ಕ' ಪ್ರತಿಮೆಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾಲಾರ್ಪಣೆ ಮಾಡುವರು. ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರಿಗೆ ವಿಶೇಷ ಸನ್ಮಾನ ನಡೆಯಲಿದೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಂಜೆ 5ಕ್ಕೆ ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಚಿವರಾದ ಬೈರತಿ ಬಸವರಾಜ್, ಎಸ್. ಅಂಗಾರ, ಸಿ.ಟಿ. ರವಿ, ವಿ.ಸುನಿಲ್ ಕುಮಾರ್, ನಾನಾ ಕ್ಷೇತ್ರಗಳ ಶಾಸಕರು ಮುಖ್ಯ ಅತಿಥಿಗಳಾಗಿರುವರು. ಅನಿವಾಸಿ ಉದ್ಯಮಿ ರೊನಾಲ್ಡ್ ಕೊಲಾಸೊ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಸುರೇಶ್ ಕಟೀಲ್ ಅವರನ್ನು ಸನ್ಮಾನಿಸಲಾಗುವುದು ಎಂದರು.
Kshetra Samachara
08/12/2021 08:05 pm