ಮಂಗಳೂರು: ಹಿಂದೆ ಸಾರ್ವಜನಿಕ ಸ್ಥಳಗಳ ಗೋಡೆಗಳೆಂದರೆ ಭಿತ್ತಿಪತ್ರ ಅಂಟಿಸಲೆಂದೇ ಇರುವ ಖಾಲಿ ಜಾಗಗಳೇ ಆಗಿತ್ತು. ಹರಿದು ಚಿಂದಿಯಾದ ಹಾಳೆ, ಅದರ ಮೇಲೆಯೇ ಮತ್ತೆ ಮತ್ತೆ ಭಿತ್ತಿಪತ್ರ ಅಂಟಿಸುತ್ತಿರುವುದನ್ನು ನಾವು ನೋಡುತ್ತಲೇ ಇದ್ದೆವು. ಆದರೆ, ಇಂದು ಅದೆಲ್ಲ ಕಣ್ಮರೆಯಾಗಿ, ಸುಂದರ ಕಲಾಚಿತ್ರ ಕಾಣಬಹುದು. ಇದೀಗ ತುಳುಸಂಸ್ಕೃತಿಯ ಅನಾವರಣ ಪ್ರಯತ್ನ ನಗರದಲ್ಲಿ ಸಾಗಿದೆ.
ʼಜೈ ತುಳುನಾಡುʼ ಹಾಗೂ ಹಾಗೂ ಇಂಡಿಯನ್ ರೂಟ್ಸ್ ಫೌಂಡೇಶನ್ ಸಹಭಾಗಿತ್ವದಲ್ಲಿ ಬಲ್ಮಠ ಮಹಿಳಾ ಕಾಲೇಜಿನ ಗೋಡೆ ಆವರಣದಲ್ಲಿ ತುಳು ಸಂಸ್ಕೃತಿ ಪರಿಚಯಿಸುವ ಗೋಡೆಚಿತ್ರ ರಚಿಸಲಾಗಿದೆ. 10ರಷ್ಟು ಚಿತ್ರ ಕಲಾವಿದರು, 20 ಮಂದಿ ಸಹಾಯಕರ ತಂಡ ಇಂದು ಬೆಳಗ್ಗೆ 7ರಿಂದ ಚಿತ್ರರಚನೆಯಲ್ಲಿ ತೊಡಗಿದೆ. ಹುಲಿವೇಷ, ಯಕ್ಷಗಾನ, ಆಟಿಕಳೆಂಜ, ಕಂಬಳ, ವೀರರಾಣಿ ಅಬ್ಬಕ್ಕ, ಮೀನು ಮಾರಾಟದ ಮಹಿಳೆ, ತುಳುಲಿಪಿ ಇತ್ಯಾದಿ ಚಿತ್ರ ವಿಶೇಷ ಗೋಡೆಗಳಲ್ಲಿ ರಾರಾಜಿಸುತ್ತಿವೆ.
ತುಳುನಾಡಿಗೆ ಹೊರಜಿಲ್ಲೆ, ಹೊರರಾಜ್ಯ, ಹೊರದೇಶಗಳಿಂದ ಸಾಕಷ್ಟು ಜನ ಬರುತ್ತಾರೆ. ಇವರಿಗೆ ತುಳು ಸಂಸ್ಕೃತಿ ಪರಿಚಯವಾಗಬೇಕು ಎಂಬ ಉದ್ದೇಶದಿಂದ ಆಸಕ್ತ ಯುವಕರ ತಂಡ ಈ ಕಾರ್ಯ ಮಾಡುತ್ತಿದೆ. ಜೊತೆಗೆ ʼತುಳುನಾಡನ್ನು ಸುಂದರವಾಗಿರಿಸಬೇಕುʼ ಎಂಬ ನಿಟ್ಟಿನಲ್ಲಿ ಜನಜಾಗೃತಿಯ 'ಗೋಡೆ ಚಿತ್ರ ಬರಹ ಅಭಿಯಾನ'ವನ್ನು ಈ ಮೂಲಕ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ತುಳು ಭಾಷಿಗರಿರುವ ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಾದ್ಯಂತ ಈ ಕಾರ್ಯಯೋಜನೆ ಅನುಷ್ಠಾನಗೊಳಿಸುವ ಯೋಜನೆ ಈ ತಂಡಕ್ಕಿದೆ.
Kshetra Samachara
05/12/2021 06:15 pm