ಉಡುಪಿ: ಮನುಷ್ಯರಲ್ಲಿ ಜಾತಿ ,ಮತ, ಭೇದ ತೊರೆದು ಸಮಾನತೆ ಸಾರುವ ಕನಕದಾಸರ ಚಿಂತನೆ ಮತ್ತು ತತ್ವಗಳು ಎಲ್ಲಾ ಕಾಲಕ್ಕೂ ಪ್ರಸ್ತುತವಾಗಿದ್ದು,ಸಾರ್ವಕಾಲಿಕ ಸತ್ಯ ಆಗಿವೆ ಎಂದು ಜಿಲ್ಲಾಧಿಕಾರಿ ಕೂರ್ಮರಾವ್ ಎಂ ಹೇಳಿದರು. ಅವರು ಇಂದು ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್‌ನಲ್ಲಿ, ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆವತಿಯಿಂದ ನಡೆದ ಶ್ರೀ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ, ಕನಕದಾಸರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಅಂದಿನ ಕಾಲದಲ್ಲಿದ್ದ ಜಾತಿ ಭೇದ ಭಾವಗಳ ಕುರಿತು ಕನಸದಾಸರು ತಮ್ಮ ಕೀರ್ತನೆಗಳಲ್ಲಿ ತಿಳಿಸಿದ್ದು, ಇಂದಿಗೂ ಸಮುದಾಯಗಳಲ್ಲಿ ಈ ಅಸಮಾನತೆ ಕಂಡು ಬರುತ್ತಿದ್ದು, ಕನಕದಾಸರ ಚಿಂತನೆಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಸಮಾಜದಲ್ಲಿ ಅಸಮಾನತೆ ತೊಡೆಯಲು ಸಾಧ್ಯವಿದೆ. ಯಾವುದೇ ವ್ಯಕ್ತಿ ಅಹಂಕಾರದಿಂದ ಶ್ರೇಷ್ಠನಾಗಲು ಸಾಧ್ಯವಿಲ್ಲ ಎಂಬುದನ್ನು ತಮ್ಮ ರಾಮ ಧಾನ್ಯ ಚರಿತ್ರೆ ಕೃತಿಯ ಮೂಲಕ ಮಾನವಕುಲಕ್ಕೆ ತಿಳಿಸಿದ್ದಾರೆ ಎಂದ ಜಿಲ್ಲಾಧಿಕಾರಿ ಕೂರ್ಮಾರಾವ್,ಉಡುಪಿಗೂ ಕನಕದಾಸರಿಗೂ ಅವಿನಾಭಾವ ಸಂಬಂಧವಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ,ಅಪರ ಜಿಲ್ಲಾಧಿಕಾರಿ ಬಾಲಕೃಷ್ಣಪ್ಪ,ಜಿಲ್ಲಾ ನಗರಾಭಿವೃಧ್ದಿ ಕೋಶದ ಯೋಜನಾ ನಿರ್ದೇಶಕಿ ಪ್ರತಿಭಾ, ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳು, ಕರ್ನಾಟಕ ಪ್ರದೇಶ ಕುರುಬರ ಸಂಘ ಉಡುಪಿ ಜಿಲ್ಲೆಯ ನಿರ್ದೇಶಕ ಬಸವರಾಜ ಕುರುಬರ, ಮುಖಂಡರಾದ ಹನುಮಂತ ಆಡಿನ, ಹನುಮಂತ ಗೋಹಿ ಮತ್ತಿತರರು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿ, ವಂದಿಸಿದರು.
Kshetra Samachara
22/11/2021 05:14 pm