ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಶ್ರೀಕೃಷ್ಣ ಸನ್ನಿಧಿಯಲ್ಲಿ ದೀಪಾವಳಿ ಪರ್ವ ಸಂಭ್ರಮ; 'ಭಕ್ತಿ ಪ್ರಭಾವಳಿಯ ದರ್ಶನ...'

ಉಡುಪಿ: ಕಡೆಗೋಲು ಶ್ರೀಕೃಷ್ಣನ ಉಡುಪಿಯಲ್ಲಿ ದೀಪಾವಳಿ ಸಂಭ್ರಮ ಮನೆಮಾಡಿದೆ. ನರಕ ಚತುರ್ದಶಿಯ ಪ್ರಯುಕ್ತ ಕೃಷ್ಣ ಮಠದಲ್ಲಿ ವಿಶೇಷ ಪೂಜೆಗಳು ನಡೆದವು. ಕಾರ್ತಿಕ ಮಾಸದಲ್ಲಿ ನಡೆಯುವ ಪಶ್ಚಿಮ ಜಾಗರ ಪೂಜೆ ದೀಪಾವಳಿಯ ವಿಶೇಷ. ಶ್ರೀಕೃಷ್ಣ ಮಠದಲ್ಲಿ ನಡೆಯುವ ತೈಲಾಭ್ಯಂಜನದಲ್ಲೂ ಭಕ್ತರು ಭಾಗಿಯಾದರು.

"ಇಂದು ನರಕ ಚತುರ್ದಶಿ. ಶ್ರೀಕೃಷ್ಣ ದೇವರು ನರಕಾಸುರನನ್ನು ಕೊಂದ ಬಳಿಕ ದೇಹದ ಉಲ್ಲಾಸಕ್ಕೆ ತೈಲಾಭ್ಯಂಜನ ಮಾಡಿಕೊಂಡ ದಿನ. ಹಾಗಾಗಿ ದೀಪಾವಳಿಯ ಮೊದಲ ದಿನ ತೈಲಾಭ್ಯಂಜನ ಮಾಡಿಕೊಳ್ಳುವುದು ರೂಢಿ. ಕೃಷ್ಣಮಠದಲ್ಲಿ ಪರ್ಯಾಯ ಮಠಾಧೀಶರು ಭಕ್ತರೊಂದಿಗೆ ಬೆರೆತು ಅಭ್ಯಂಜನ ಮಾಡಿಕೊಳ್ಳುತ್ತಾರೆ. ಇಂದು ನಡೆದ ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಭಾಗವಹಿಸಿದ್ದರು.

ಶ್ರೀ ಕೃಷ್ಣ ದೇವರ ಗರ್ಭಗುಡಿಯ ಸುತ್ತಲೂ ಸಾವಿರಾರು ದೀಪಗಳನ್ನು ಬೆಳಗಿಸಲಾಯಿತು. ಮುಂಜಾನೆ ಪಕ್ಷಿಗಳು ಕಲರವ ಮಾಡುವ ಹೊತ್ತಲ್ಲಿ ಕೃಷ್ಣ ದೇವರನ್ನು ಪರ್ಯಾಯ ಅದಮಾರು ಮಠಾಧೀಶರು ಬಹು ಬಗೆಯಿಂದ ಪೂಜಿಸಿದರು. ನಸುಕಿನ ವೇಳೆ ಈ ವಿಶೇಷ ಪೂಜೆಯನ್ನು ನೋಡುವುದೇ ಸಂಭ್ರಮ"

"ನರಕ ಚತುರ್ದಶಿಯಂದು ಕೈಗೊಳ್ಳುವ ತೈಲಾಭ್ಯಂಜನಕ್ಕೆ ವಿಶೇಷ ಮಹತ್ವವಿದೆ. ಕೃಷ್ಣಮಠದ ಹೊರ ಸುತ್ತಿನಲ್ಲಿ ಬೃಹತ್ ಗಾತ್ರದ ಒಲೆಗಳನ್ನು ಇಟ್ಟು, ಪೂಜಿಸಲಾಗುತ್ತದೆ. ಸ್ವತಹ ಪರ್ಯಾಯ ಮಠಾಧೀಶರ ಉಪಸ್ಥಿತಿಯಲ್ಲಿ ಈ ಪೂಜೆ ನಡೆಯುತ್ತದೆ. ಕಟ್ಟಿಗೆಯ ಒಲೆಯಿಂದ ಕುದಿಸಿದ ನೀರಿನಲ್ಲಿ ಸಾಂಪ್ರದಾಯಿಕ ರೀತಿಯ ತೈಲಾಭ್ಯಂಜನ ನಡೆಸಲಾಗುತ್ತದೆ. ಕೃಷ್ಣ ದೇವರ ಸನ್ನಿಧಾನದಲ್ಲಿ ಈ ಎಲ್ಲ ಆಚರಣೆ ನಡೆಯುವುದರಿಂದ ವಿಶೇಷ ಮಹತ್ವ ಪಡೆದಿದೆ.

ದೀಪಾವಳಿಯುದ್ದಕ್ಕೂ ವಿವಿಧ ಆಚರಣೆಗಳು ಕೃಷ್ಣಮಠದಲ್ಲಿ ನಡೆಯುತ್ತವೆ. ಲಕ್ಷದೀಪೋತ್ಸವದವರೆಗೆ ಪ್ರತಿದಿನವೂ ತುಳಸಿ ಸಂಕೀರ್ತನೆ ನಡೆಸಲಾಗುತ್ತದೆ, ಸಾವಿರಾರು ಮಂದಿ ಭಾಗವಹಿಸುತ್ತಾರೆ"

Edited By : Manjunath H D
Kshetra Samachara

Kshetra Samachara

04/11/2021 09:10 pm

Cinque Terre

6.84 K

Cinque Terre

0