ವರದಿ: ಸಂದೇಶ್ ಶೆಟ್ಟಿ ಆಜ್ರಿ ಪಬ್ಲಿಕ್ ನೆಕ್ಸ್ಟ್ ಉಡುಪಿ
ಉಡುಪಿ: ನಾಗಮಂಡಲ ಕರಾವಳಿಯ ನಾಗಾರಾಧನೆಯ ದೊಡ್ಡ ಸೇವೆ. ಉಡುಪಿಯ ನಾಲ್ಕೂರಿನಲ್ಲಿ ದೊಡ್ಮನೆ ಕುಟುಂಬ ಚತುಃಪವಿತ್ರ ನಾಗಮಂಡಲೋತ್ಸವ ನಡೆಸಿತು. ಲಕ್ಷಾಂತರ ಮಂದಿ ಪವಿತ್ರ ಸೇವೆಯಲ್ಲಿ ಪಾಲ್ಗೊಂಡು ಪುನೀತರಾದರು.
ನಾಗ ಕರಾವಳಿಯ ಜನರ ಆರಾಧ್ಯ ಶಕ್ತಿ. ಉಡುಪಿ- ದಕ್ಷಿಣಕನ್ನಡದಲ್ಲಿ ನಾಗದೇವರ ಪೂಜೆಗೆ ಆರಾಧನೆಗಳಿಗೆ ವಿಶೇಷ ಸ್ಥಾನಮಾನವಿದೆ. ನಾಗಮಂಡಲೋತ್ಸವ ನಾಗರಾಜನಿಗೆ ಬಲು ಪ್ರಿಯವಾದ ಸೇವೆ ಎಂಬೂದು ಕರಾವಳಿಗರ ನಂಬಿಕೆ. ಇಷ್ಟಾರ್ಥ ಸಿದ್ಧಿ.., ಕಷ್ಟ ಪರಿಹಾರ- ಹರಕೆ ತೀರಿಸಲು ನಾಗಮಂಡಲ ಸೇವೆ ಮಾಡುವುದು ವಾಡಿಕೆ. ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕು ದೊಡ್ಮನೆ ಕುಟುಂಬ ಚತುಃಪವಿತ್ರ ನಾಗಮಂಡಲ ಸೇವೆ ಮಾಡಿಸಿದೆ.
ನಾಗಪಾತ್ರಿ ಮತ್ತು ನಾಗಕನ್ನಿಕೆಯ ನರ್ತನಕ್ಕೆ ಮುನ್ನ ಧಾರ್ಮಿಕ ವಿಧಿಯಾದ ಹಾಲಿಟ್ಟು ಸೇವೆ ವೈಭವದಿಂದ ನಡೆಯಿತು. ನಾಗಮಂಡಲದ ಪ್ರಮುಖ ಕೇಂದ್ರಬಿಂದು ಹೂವು, ಅಡಿಕೆ, ಕೆಂದಾಳೆ ಸೀಯಾಳದಿಂದ ಅಲಂಕೃತವಾದ ಮಂಡಲ ಚಪ್ಪರ.
ನಾಗಪಾತ್ರಿ ಮತ್ತು ನಾಗ ಕನ್ನಿಕೆಯ ನರ್ತನ ಸೇವೆ ಕಣ್ಣಿಗೆ ಹಬ್ಬ ತರುತ್ತದೆ. ಮಂಟಪದಲ್ಲಿ ಮಂಡಲ ರಚಿಸಿ- ಅದರ ಸುತ್ತಲೂ ಪಾತ್ರಿ ಮತ್ತು ನಾಗಕನ್ನಿಕೆ ನರ್ತಿಸುತ್ತಾರೆ. ಸರ್ಪಗಳ ಮಿಥುನ ಪ್ರಕ್ರಿಯೆಯೇ ನಾಗಮಂಡಲದ ವಸ್ತು. ನಾಗಪಾತ್ರಿ ಆವೇಶಗೊಂಡು ನರ್ತಿಸುವಾಗ ಹಿಂಗಾರವನ್ನು ಮುಖಕ್ಕೆ ಲೇಪಿಸಿಕೊಳ್ಳುತ್ತಾರೆ. ರಾಶಿ ರಾಶಿ ಹಿಂಗಾರ ನಾಗಮಂಡಲ ಸೇವೆಗೆ ಉಪಯೋಗವಾಗುತ್ತದೆ.
ನಾಗಮಂಡಲ ಸೇವೆಗೆ ಸುಮಾರು 35ರಿಂದ 40 ಲಕ್ಷ ರೂಪಾಯಿ ವೆಚ್ಚವಾಗುತ್ತದೆ. ನಾಲ್ಕೂರು ನಾಗಮಂಡಲ ಸೇವೆಯಲ್ಲಿ 20 ಸಾವಿರ ಜನಕ್ಕೆ ಅನ್ನಸಂತರ್ಪಣೆ ನಡೆದಿದೆ. ನಾಗಮಂಡಲ ಆರಾಧನೆಗೆ ಸುಮಾರು ಒಂದು ತಿಂಗಳಿಂದ ತಯಾರಿ ನಡೆಯುತ್ತದೆ ಎಂಬೂದು ಮತ್ತೊಂದು ವಿಶೇಷ.
Kshetra Samachara
28/02/2021 12:42 pm